ಸೊರಬ: ತಾಲೂಕಿನ ಸೂರಣಗಿ ಗ್ರಾಮದಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಶೆಡ್‌ನಲ್ಲಿದ್ದ ಸುಮಾರು 300ಕ್ಕೂ ಹೆಚ್ಚು ಕುರಿ ಹಾಗೂ ಮರಿಗಳು ಬೆಂಕಿಗಾಹುತಿಯಾಗಿವೆ.
ಗ್ರಾಮದ ನಿವಾಸಿ ರಾಮಣ್ಣ ಎಂಬುವರು ಕುರಿ ಸಾಕಣೆಯನ್ನೇ ಜೀವನೋಪಾಯ ಮಾಡಿಕೊಂಡಿದ್ದರು. ಎಂದಿನಂತೆ ರಾತ್ರಿ ವೇಳೆಯಲ್ಲಿ ಕುರಿಗಳನ್ನು ಸುರಕ್ಷಿತವಾಗಿ ಶೆಡ್‌ನಲ್ಲಿ ಕೂಡಿ ಹಾಕಿ ಬೀಗ ಜಡಿಯಲಾಗಿತ್ತು. ಆದರೆ ತಡರಾತ್ರಿ ಹಠಾತ್ತನೆ ಶೆಡ್‌ಗೆ ಬೆಂಕಿ ಆವರಿಸಿಕೊಂಡಿದ್ದು, ಒಳಗೆ ಸಿಲುಕಿಕೊಂಡ ನೂರಾರು ಕುರಿಗಳಿಗೆ ಹೊರಬರಲು ಸಾಧ್ಯವಾಗದೆ ಸ್ಥಳದಲ್ಲೇ ಸುಟ್ಟು ಕರಕಲಾಗಿವೆ.
ಕಷ್ಟಪಟ್ಟು ಸಾಕಿದ್ದ ನೂರಾರು ಕುರಿಗಳು ಕಣ್ಣೆದುರೇ ಕಲ್ಲಿದ್ದಲಿನಂತಾಗಿರುವುದನ್ನು ಕಂಡು ಮಾಲೀಕ ರಾಮಣ್ಣ ಕಂಗಾಲಾಗಿದ್ದಾರೆ. ಈ ಅವಘಡದಿಂದ ಅವರಿಗೆ ಲಕ್ಷಾಂತರ ರೂಪಾಯಿ ಆರ್ಥಿಕ ನಷ್ಟವುಂಟಾಗಿದೆ. ಶೆಡ್ ಸುತ್ತಮುತ್ತ ಬೆಂಕಿ ತಗುಲುವಂತಹ ಯಾವುದೇ ಅಪಾಯಕಾರಿ ವಸ್ತುಗಳಿಲ್ಲದಿದ್ದರೂ, ಬೆಂಕಿ ಹೊತ್ತಿಕೊಂಡ ಬಗೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಯಾರೋ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಕೃತ್ಯವೆಸಗಿರಬಹುದು ಎಂದು ರಾಮಣ್ಣ ಶಂಕೆ ವ್ಯಕ್ತಪಡಿಸಿದ್ದಾರೆ.

ಪ್ರಕರಣ ಸಂಬಂಧ ಸಂತ್ರಸ್ತರು ಆನವಟ್ಟಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಸಮಗ್ರ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಕೋರಿದ್ದಾರೆ. ಇದು ಆಕಸ್ಮಿಕವಾಗಿ ಸಂಭವಿಸಿದ ಅನಾಹುತವೇ ಅಥವಾ ಯಾರಾದರೂ ಕಿಡಿಗೇಡಿಗಳ ದುಷ್ಕೃತ್ಯವೇ ಎಂಬುದು ತನಿಖೆಯ ಬಳಿಕವಷ್ಟೇ ಬೆಳಕಿಗೆ ಬರಬೇಕಿದೆ. ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.




ಓದುಗರ ಅಭಿಪ್ರಾಯಗಳು