ನೋಟಿಸ್ ಇಲ್ಲ, ಮುನ್ಸೂಚನೆ ಇಲ್ಲ: ಫಲ ನೀಡುತ್ತಿದ್ದ ಅಡಿಕೆ ಮರಗಳನ್ನು ಧ್ವಂಸ ಮಾಡಿದ ಅಧಿಕಾರಿಗಳು – ಬಿವೈಆರ್ ಗರಂ

ಸೊರಬ: ತಾಲೂಕಿನ ಆನವಟ್ಟಿ ಹೋಬಳಿ ವ್ಯಾಪ್ತಿಯ ತೇವರತೆಪ್ಪ ಗ್ರಾಮದಲ್ಲಿ ರೈತರು ಹದಿನೈದು ವರ್ಷಗಳಿಂದ ಸಾಕಿ ಬೆಳೆಸಿದ, ಫಸಲು ನೀಡುತ್ತಿದ್ದ ಅಡಿಕೆ ತೋಟವನ್ನು ಅಧಿಕಾರಿಗಳು ಏಕಾಏಕಿ ತೆರವುಗೊಳಿಸಿರುವುದಕ್ಕೆ ಸಂಸದ ಬಿ.ವೈ. ರಾಘವೇಂದ್ರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

ಅಡಿಕೆ ಮರಗಳನ್ನು ಧ್ವಂಸಗೊಳಿಸಿದ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಿದ ಸಂಸದರು, ಕಂಗಾಲಾಗಿದ್ದ ರೈತ ಕುಟುಂಬಕ್ಕೆ ಸಾಂತ್ವನ ಹೇಳಿ ಆರ್ಥಿಕ ನೆರವು ನೀಡಿದರು. ಯಾವುದೇ ಮುನ್ಸೂಚನೆ ಅಥವಾ ಪೂರ್ವ ನೋಟಿಸ್ ನೀಡದೆ ಬದುಕಿಗೆ ಆಧಾರವಾಗಿದ್ದ ಮರಗಳನ್ನು ಧರೆಗುರುಳಿಸಿರುವುದು ಅಮಾನವೀಯ. ರೈತರ ವರ್ಷಗಳ ಬೆವರು, ಪರಿಶ್ರಮ ಕ್ಷಣಾರ್ಧದಲ್ಲಿ ನಾಶವಾಗಿ ಅಪಾರ ನಷ್ಟ ಸಂಭವಿಸಿದೆ ಎಂದು ವಿಷಾದಿಸಿದರು. ಸರ್ಕಾರ ಕೂಡಲೇ ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ಕಲ್ಪಿಸಿ ನ್ಯಾಯ ಒದಗಿಸಬೇಕು ಹಾಗೂ ಅನ್ನದಾತರ ಜೀವನೋಪಾಯಕ್ಕೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.

ಬಳಿಕ ಬಿಜೆಪಿ ಸೊರಬ ಮಂಡಲ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಸಂಸದರು ಭಾಗವಹಿಸಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಪ್ರತಿಭಟನೆಯಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ, ತಾಲೂಕು ಅಧ್ಯಕ್ಷ ಪ್ರಕಾಶ್ ಸೇರಿದಂತೆ ಪಕ್ಷದ ಪ್ರಮುಖ ಮುಖಂಡರು, ಕಾರ್ಯಕರ್ತರು ಮತ್ತು ನೂರಾರು ರೈತರು ಉಪಸ್ಥಿತರಿದ್ದರು.

ಓದುಗರ ಅಭಿಪ್ರಾಯಗಳು

Leave a Reply

Your email address will not be published. Required fields are marked *