ಶಿವಮೊಗ್ಗ: ಜಿಲ್ಲೆಯ ಶಂಕರ ವಲಯ ವ್ಯಾಪ್ತಿಯ ಈಚವಾಡಿ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ಸುಮಾರು 10 ರಿಂದ 12 ವರ್ಷ ಪ್ರಾಯದ ಗಂಡು ಕಾಡಾನೆಯೊಂದು ಸಾವನ್ನಪ್ಪಿರುವ ಘಟನೆ ಶನಿವಾರ ಬೆಳಗಿನಜಾವ ಬೆಳಕಿಗೆ ಬಂದಿದೆ.
ಗ್ರಾಮದ ಸರ್ವೆ ನಂಬರ್ 16ರ ಭತ್ತದ ಗದ್ದೆಯ ಬದುವಿನಲ್ಲಿ ಕಾಡಾನೆ ಶವವಾಗಿ ಪತ್ತೆಯಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಆನೆಯ ಮೃತದೇಹದ ಅಕ್ಕಪಕ್ಕದಲ್ಲಿ ಅಕ್ರಮವಾಗಿ ತಂತಿ ಬೇಲಿ ಅಳವಡಿಸಿರುವುದು ಹಾಗೂ ಸಮೀಪದಲ್ಲೇ ವಿದ್ಯುತ್ ಕಂಬ ಇರುವುದು ಕಂಡುಬಂದಿದೆ. ಮೇಲ್ನೋಟಕ್ಕೆ ವಿದ್ಯುತ್ ಸ್ಪರ್ಶದಿಂದಲೇ ಆನೆ ಸಾವನ್ನಪ್ಪಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ಆರೋಪಿ ಅರೆಸ್ಟ್
ಘಟನೆಗೆ ಸಂಬಂಧಿಸಿದಂತೆ ತಕ್ಷಣ ತನಿಖೆ ಕೈಗೆತ್ತಿಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು, ಆರೋಪಿ ಅಲಿಮಿಯಾ ಬಿನ್ ಫೀರ್ ಸಮೀಯಾ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳ ಮಹಜರು ಹಾಗೂ ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.
“ಭತ್ತದ ಬೆಳೆಯು ಸದ್ಯ ತೆನೆ ಬಿಡುವ ಹಂತದಲ್ಲಿದೆ. ಇತ್ತೀಚೆಗೆ ಕಾಡುಹಂದಿಗಳ ಕಾಟ ಹೆಚ್ಚಾಗಿದ್ದರಿಂದ, ಅವುಗಳಿಂದ ಬೆಳೆ ರಕ್ಷಿಸಿಕೊಳ್ಳಲು ಗದ್ದೆಯ ಬದುವಿನ ಮೇಲೆ ತಂತಿ ಎಳೆದು ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಿದ್ದೆ” ಎಂದು ಆತ ವಿಚಾರಣೆ ವೇಳೆ ಹೇಳಿದ್ದಾನೆ.

ಕಠಿಣ ಕ್ರಮಕ್ಕೆ ಸಿದ್ಧತೆ
ಆರೋಪಿಯ ವಿರುದ್ಧ ಅರಣ್ಯ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 9ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ. ಮತ್ತೊಂದೆಡೆ, ಅಕ್ರಮ ವಿದ್ಯುತ್ ಬಳಕೆ ಸಂಬಂಧ ಆರೋಪಿಯ ವಿರುದ್ಧ ಭಾರತೀಯ ವಿದ್ಯುತ್ ಕಾಯ್ದೆಯಡಿ (Electricity Act) ಪ್ರತ್ಯೇಕ ಕೇಸ್ ದಾಖಲಿಸಲು ಮೆಸ್ಕಾಂ (MESCOM) ಇಲಾಖೆಗೆ ಅರಣ್ಯ ಇಲಾಖೆ ದೂರು ನೀಡಿದೆ.
ಸರ್ಕಾರದ ನಿಗದಿತ ಕಾರ್ಯವಿಧಾನದ (SOP) ಪ್ರಕಾರ ಮೃತ ಕಾಡಾನೆಯ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಶಿವಮೊಗ್ಗ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






ಓದುಗರ ಅಭಿಪ್ರಾಯಗಳು