ಶಿವಮೊಗ್ಗ: ನಗರದಲ್ಲಿ ವಿಜಯದಶಮಿ ಮೆರವಣಿಗೆ ವೇಳೆ ಅಂಬಾರಿ ಹೊತ್ತ ಆನೆ ಸೋಮಣ್ಣ ನಿಯಂತ್ರಣ ತಪ್ಪಿ ಓಡಿದ ಅಹಿತಕರ ಘಟನೆಗೆ ಸಂಬಂಧಿಸಿದಂತೆ, ಅರಣ್ಯ ಇಲಾಖೆಯ ಶಿವಮೊಗ್ಗ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಪ್ರಸನ್ನ ಕೃಷ್ಣ ಪಟಗಾರ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.
ಪ್ರಸನ್ನ ಕೃಷ್ಣ ಪಟಗಾರ್ ಅವರನ್ನು ಮಡಿಕೇರಿಯ ಸಂಶೋಧನಾ ವಿಭಾಗದ ಡಿಸಿಎಫ್ ಹುದ್ದೆಗೆ ಸ್ಥಳಾಂತರಿಸಲಾಗಿದೆ. ಇವರ ಜಾಗಕ್ಕೆ 2021ರ ಬ್ಯಾಚ್ನ ಐಎಫ್ಎಸ್ ಅಧಿಕಾರಿ ರಾಘವೇಂದ್ರ ರಾವ್ ಅವರನ್ನು ನಿಯೋಜಿಸಲಾಗಿದೆ.
ರಾಘವೇಂದ್ರ ರಾವ್ ಅವರು ಸದ್ಯ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ (ಕೆಎಫ್ಡಿಸಿ) ಶಿವಮೊಗ್ಗ ವಿಭಾಗದಲ್ಲಿ ಡಿಸಿಎಫ್ ಹಾಗೂ ವಿಭಾಗ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ರಾಘವೇಂದ್ರ ರಾವ್ ಅವರಿಂದ ತೆರವಾಗುವ ಕೆಎಫ್ಡಿಸಿ ಹುದ್ದೆಗೆ, ಮುನಿರಾಬಾದ್ನ ತುಂಗಭದ್ರಾ ‘ಕಾಡಾ’ ವಿಭಾಗದ ಡಿಸಿಎಫ್ ಮತ್ತು ಡಿಎಒ ಆಗಿರುವ ಭಾಗ್ಯಲಕ್ಷ್ಮಿ ಎಂ.ಸಿ. ಅವರನ್ನು ವರ್ಗಾಯಿಸಲಾಗಿದೆ.
ಘಟನೆಯ ವಿವರ:
ವಿಜಯದಶಮಿಯಂದು ನಡೆದ ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ‘ಸಾಗರ್’ ಆನೆ ಮುಂಚೂಣಿಯ ನಿಶಾನೆ ಆನೆಯಾಗಿ ಸಾಗುತ್ತಿತ್ತು. ಆದರೆ, ಡಿಸಿಎಫ್ ಪ್ರಸನ್ನ ಕೃಷ್ಣ ಪಟಗಾರ್ ಅವರ ಸೂಚನೆಯಂತೆ ನಿಶಾನೆ ಆನೆಯನ್ನು ಏಕಾಏಕಿ ಪಕ್ಕಕ್ಕೆ ಸರಿಸಿ, ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆಯನ್ನೇ ಮುಂದಕ್ಕೆ ಕರೆತರಲಾಯಿತು. ಮುಂದೆ ಸಾಗುತ್ತಿದ್ದ ಪರಿಚಿತ ಆನೆ ಕಾಣೆಯಾಗುತ್ತಿದ್ದಂತೆ ಬೆದರಿದ ಸೋಮಣ್ಣ, ನಿಯಂತ್ರಣ ಕಳೆದುಕೊಂಡು ದಿಕ್ಕಾಪಾಲಾಗಿ ಓಡಿ ಅಂಬಾರಿಯನ್ನು ಕೆಳಕ್ಕೆ ಕೆಡವಿತ್ತು.
ಮೆರವಣಿಗೆಯಲ್ಲಿ ನಿಶಾನೆ ಆನೆಯ ಬದಲಾವಣೆಗೆ ಡಿಸಿಎಫ್ ಸೂಚನೆ ನೀಡುತ್ತಿರುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದವು. ಸೂಕ್ತ ನಿರ್ವಹಣೆ ಮತ್ತು ಮುನ್ನೆಚ್ಚರಿಕೆ ವಹಿಸದ ಅಧಿಕಾರಿಯ ನಿರ್ಧಾರದ ವಿರುದ್ಧ ಪರಿಸರ ಹೋರಾಟಗಾರರು ಹಾಗೂ ಸಾರ್ವಜನಿಕ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಅವರ ವಿರುದ್ಧ ಶಿಸ್ತುಕ್ರಮಕ್ಕೆ ಒತ್ತಾಯಿಸಿದ್ದರು. ಸಾರ್ವಜನಿಕ ಒತ್ತಡದ ಬೆನ್ನಲ್ಲೇ ಇದೀಗ ಅಧಿಕಾರಿಯ ವರ್ಗಾವಣೆ ಪ್ರಕ್ರಿಯೆ ನಡೆದಿದೆ.






ಓದುಗರ ಅಭಿಪ್ರಾಯಗಳು