ಶಿವಮೊಗ್ಗ: ಜಿಲ್ಲೆಯಲ್ಲಿ ಮುಂಗಾರು ಕೈಕೊಟ್ಟ ಪರಿಣಾಮ ತೀವ್ರ ಬೆಳೆ ನಷ್ಟ ಅನುಭವಿಸಿರುವ ಅನ್ನದಾತರಿಗೆ ವಿಮಾ ಸಂಸ್ಥೆಗಳು ಕನಿಷ್ಠ ಹಾಗೂ ಅವೈಜ್ಞಾನಿಕ ಪರಿಹಾರ ನೀಡುತ್ತಿರುವುದನ್ನು ತಕ್ಷಣವೇ ಸರಿಪಡಿಸಿ, ವಾಸ್ತವ ನಷ್ಟಕ್ಕೆ ತಕ್ಕಂತೆ ಪೂರ್ಣ ಮೊತ್ತ ವಿತರಿಸಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬೆಳೆ ವಿಮೆ ವಿತರಣೆ ಕುರಿತು ಆಯೋಜಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೋಷಪೂರಿತ ಮಳೆ ಮಾಪಕಗಳು:
ಜಿಲ್ಲೆಯ ಸುಮಾರು 125ಕ್ಕೂ ಹೆಚ್ಚು ಮಳೆ ಮಾಪನ ಕೇಂದ್ರಗಳು ದುರಸ್ತಿಯಲ್ಲಿದ್ದ ಕಾರಣ ಮಳೆಯ ನಿಖರ ಮಾಹಿತಿ ದಾಖಲಾಗಿಲ್ಲ. ಇದರಿಂದಾಗಿ ರೈತರಿಗೆ ಸಿಗಬೇಕಾದ ವಿಮಾ ಹಣದ ಲೆಕ್ಕಾಚಾರವೇ ತಪ್ಪಾಗಿದೆ.

ಪರ್ಯಾಯ ವರದಿಗಳ ಬಳಕೆ:
ಸರ್ಕಾರಿ ಕೇಂದ್ರಗಳ ವೈಫಲ್ಯದ ಹಿನ್ನೆಲೆಯಲ್ಲಿ, ಸ್ಥಳೀಯ ಖಾಸಗಿ ಸಂಸ್ಥೆಗಳು ಅಥವಾ ಇತರ ವಿಶ್ವಾಸಾರ್ಹ ಮೂಲಗಳು ದಾಖಲಿಸಿರುವ ಮಳೆ ಪ್ರಮಾಣವನ್ನು ಪರಿಗಣಿಸಿ ಪರಿಹಾರ ಮೊತ್ತವನ್ನು ಪುನರ್ ಪರಿಶೀಲಿಸಬೇಕು.
ಕಂಪನಿಗಳ ಲಾಭಕೋರತನ:
ರೈತರು ಹಾಗೂ ಸರ್ಕಾರಗಳಿಂದ ಕೋಟ್ಯಂತರ ರೂಪಾಯಿ ಪ್ರೀಮಿಯಂ ವಂತಿಗೆ ಸಂಗ್ರಹಿಸುತ್ತಿರುವ ವಿಮಾ ಕಂಪನಿಗಳು, ಪರಿಹಾರ ನೀಡುವಾಗ ಮಾತ್ರ ಅತ್ಯಂತ ನಿಕೃಷ್ಟ ಮೊತ್ತವನ್ನು ನಿಗದಿಪಡಿಸಿ ಲಾಭ ಮಾಡಿಕೊಳ್ಳುತ್ತಿವೆ.
ಹೋರಾಟದ ಎಚ್ಚರಿಕೆ:
ಕೆಎಸ್‌ಎನ್‌ಎಂಡಿಸಿ (KSNMDC) ಮತ್ತು ವಿಮಾ ಸಂಸ್ಥೆಗಳ ಜತೆ ಚರ್ಚಿಸಿ ಈ ಲೋಪವನ್ನು ತಕ್ಷಣವೇ ಸರಿಪಡಿಸಬೇಕು. ಇಲ್ಲವಾದಲ್ಲಿ ಸಂತ್ರಸ್ತ ರೈತರೊಂದಿಗೆ ಸೇರಿ ಉಗ್ರ ಹೋರಾಟ ರೂಪಿಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

“ಜಿಲ್ಲೆಯ ಎಲ್ಲಾ ಮಳೆ ಮಾಪನ ಕೇಂದ್ರಗಳ ದತ್ತಾಂಶಗಳನ್ನು ತುಲನಾತ್ಮಕವಾಗಿ ಪರಿಶೀಲಿಸಿ, ವಾಸ್ತವಿಕ ಮಳೆ ಪ್ರಮಾಣವನ್ನು ಆಧರಿಸಿ ವರದಿ ಸಿದ್ಧಪಡಿಸಲಾಗುವುದು. ರೈತರಿಗೆ ಆಗಿರುವ ಅನ್ಯಾಯವನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರ ದೊರಕಿಸಿಕೊಡಲು ಪ್ರಾಮಾಣಿಕ ಯತ್ನ ನಡೆಸಲಾಗುವುದು.”
– ಪ್ರಭುಲಿಂಗ ಕವಳಿಕಟ್ಟಿ, ಡಿಸಿ
“ತೀರ್ಥಹಳ್ಳಿ ತಾಲೂಕಿನಲ್ಲಿ ತಾಂತ್ರಿಕ ದೋಷಗಳಿಂದಾಗಿ ದಾಖಲಾದ ಮಳೆ ಪ್ರಮಾಣ ವಾಸ್ತವಕ್ಕೆ ದೂರವಾಗಿದೆ. ಮಳೆ ಮಾಪಕಗಳ ದೈನಂದಿನ ನಿರ್ವಹಣೆಯನ್ನು ಸ್ಥಳೀಯರಿಗೆ ವಹಿಸಬೇಕು ಮತ್ತು ಆಯಾ ಗ್ರಾಮ ಪಂಚಾಯಿತಿಗಳಲ್ಲೇ ಈ ಮಾಹಿತಿ ಸಾರ್ವಜನಿಕರಿಗೆ ಲಭ್ಯವಿರಬೇಕು.”
– ಕೆ.ವಿ. ಕೃಷ್ಣಮೂರ್ತಿ, ತೀರ್ಥಹಳ್ಳಿ
“ವಿಮಾ ಕಂಪನಿಗಳು ನಿಯಮಾವಳಿಗಳ (ಟರ್ಮ್ ಶೀಟ್) ನೆಪವೊಡ್ಡಿ ರೈತರಿಗೆ ದ್ರೋಹ ಬಗೆಯುತ್ತಿವೆ. ಸಂಗ್ರಹವಾದ ಪ್ರೀಮಿಯಂಗೆ ಹೋಲಿಸಿದರೆ ವಿತರಿಸುತ್ತಿರುವ ಮೊತ್ತ ತೀರಾ ಕಡಿಮೆ. ಜಿಲ್ಲಾಡಳಿತ ಇಂತಹ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.”
– ಮಲ್ಲಿಕಾರ್ಜುನ ಹಕ್ರೆ, ಸಾಗರ
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ., ಮಾಜಿ ಸಚಿವ ಹರತಾಳು ಹಾಲಪ್ಪ, ರೈತ ಮುಖಂಡರಾದ ಮೇಘರಾಜ್, ಜಗದೀಶ್ ಸೇರಿದಂತೆ ಕೃಷಿ, ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ರೈತ ಪ್ರತಿನಿಧಿಗಳು ಪಾಲ್ಗೊಂಡಿದ್ದರು.






ಓದುಗರ ಅಭಿಪ್ರಾಯಗಳು