ಹೊಸನಗರ: ತಾಲೂಕಿನ ಗರ್ತಿಕೆರೆ ಗ್ರಾಮದ ಬಾರ್ ಮುಂಭಾಗದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ನಡೆದಿದ್ದು, ಈ ಸಂಬಂಧ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮ್ಮಚ್ಚಿ ಗ್ರಾಮದ ಮಧು ಕೆ.ಪಿ. (36) ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಗರ್ತಿಕೆರೆ ನಿವಾಸಿ ಪ್ರಶಾಂತ ಎಂಬಾತನ ವಿರುದ್ಧ ದೂರು ದಾಖಲಾಗಿದೆ.
ಘಟನೆಯ ವಿವರ:
ನವೆಂಬರ್ 3ರ ಸಂಜೆ ಮಧು ತಮ್ಮ ಸ್ನೇಹಿತರಾದ ಅಭಿಷೇಕ್ ಮತ್ತು ಸೃಜನ್ ಅವರೊಂದಿಗೆ ಕಮ್ಮಚ್ಚಿ ರಸ್ತೆಯ ಗರ್ತಿಕೆರೆ ಬಾರ್‌ಗೆ ತೆರಳಿದ್ದರು. ಈ ವೇಳೆ ಅಲ್ಲಿಗೆ ಬಂದ ಆರೋಪಿ ಪ್ರಶಾಂತ, ಮಧು ಅವರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಜಾತಿ ನಿಂದನೆ ಮಾಡಿದ್ದಾನೆ ಎನ್ನಲಾಗಿದೆ.
ಮಾತಿನ ಚಕಮಕಿ ತಾರಕಕ್ಕೇರಿದಾಗ ಆರೋಪಿಯು ಮಧು ಅವರ ಬಲಗಣ್ಣಿನ ಭಾಗಕ್ಕೆ ಬಲವಾಗಿ ಹಲ್ಲೆ ನಡೆಸಿದ್ದಾನೆ. ಅಷ್ಟಕ್ಕೇ ನಿಲ್ಲದೆ, ತನ್ನ ಜೇಬಿನಲ್ಲಿದ್ದ ಚಾಕುವನ್ನು ತೆಗೆದು ಕೊಲೆ ಮಾಡುವ ಉದ್ದೇಶದಿಂದ ಇರಿಯಲು ಯತ್ನಿಸಿದ್ದಾನೆ. ತಕ್ಷಣವೇ ಜೊತೆಯಲ್ಲಿದ್ದ ಸ್ನೇಹಿತರು ಮಧ್ಯಪ್ರವೇಶಿಸಿ ಆರೋಪಿಯನ್ನು ತಡೆದು ಗಲಾಟೆ ಬಿಡಿಸಿದ್ದಾರೆ. ಪ್ರಾಣಾಪಾಯದಿಂದ ಪಾರಾಗಲು ಮಧು ಬಾರ್ ಒಳಗೆ ಓಡಿಹೋಗಿ ರಕ್ಷಣೆ ಪಡೆದುಕೊಂಡಿದ್ದಾರೆ.
ಘಟನೆ ಕುರಿತು ಮಧು ನೀಡಿದ ದೂರಿನನ್ವಯ ರಿಪ್ಪನ್‌ಪೇಟೆ ಠಾಣೆ ಪೊಲೀಸರು ಆರೋಪಿ ಪ್ರಶಾಂತ ವಿರುದ್ಧ ಬಿಎನ್‌ಎಸ್ (BNS) ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ (ಅಟ್ರಾಸಿಟಿ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.






ಓದುಗರ ಅಭಿಪ್ರಾಯಗಳು