ಕಟ್ ಆದ ಆಕ್ಸಲ್, ಪಲ್ಟಿಯಾದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ 42 ಜೀವಗಳು ಪಾರಾಗಿದ್ದು ಹೇಗೆ?

ಸಾಗರ: ಚಲಿಸುತ್ತಿದ್ದ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲೇ ಮಗುಚಿ ಬಿದ್ದ ಘಟನೆ ಸಾಗರ ಪಟ್ಟಣದ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಬೆಂಗಳೂರು ಮಾರ್ಗವಾಗಿ ಸಾಗರ ಪಟ್ಟಣಕ್ಕೆ ಆಗಮಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್, ಸ್ಥಳೀಯ ಬಾಪಟ್ ಕಲ್ಯಾಣ ಮಂಟಪದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ವೇಳೆ ಈ ಅವಘಡ ನಡೆದಿದೆ. ವಾಹನದ ಆಕ್ಸಲ್ ಬ್ಲೇಡ್ ಅನಿರೀಕ್ಷಿತವಾಗಿ ಕಟ್ ಆದ ಪರಿಣಾಮ, ಚಾಲಕನ ಹತೋಟಿ ಕಳೆದುಕೊಂಡು ಬಸ್ ರಸ್ತೆಯಲ್ಲೇ ಪಲ್ಟಿಯಾಗಿದೆ.

ದುರ್ಘಟನೆಯ ಸಂದರ್ಭದಲ್ಲಿ ಬಸ್ಸಿನಲ್ಲಿ ಚಾಲಕ-ನಿರ್ವಾಹಕರೂ ಸೇರಿದಂತೆ ಒಟ್ಟು 42 ಮಂದಿ ಪ್ರಯಾಣಿಕರಿದ್ದರು. ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೆಲ ಪ್ರಯಾಣಿಕರಿಗೆ ಸಣ್ಣ-ಪುಟ್ಟ ತರಚಿದ ಗಾಯಗಳಾಗಿದ್ದು, ಗಾಯಾಳುಗಳನ್ನು ಸಾಗರ ನಗರದ ಉಪವಿಭಾಗ ಆಸ್ಪತ್ರೆಗೆ ಕೊಂಡೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ.

ಘಟನಾ ಸ್ಥಳಕ್ಕೆ ಸಾಗರ ಪೇಟೆ ಠಾಣೆಯ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ, ದೂರು ದಾಖಲಿಸಿಕೊಂಡಿದ್ದಾರೆ. ಹೆದ್ದಾರಿಯಲ್ಲಿ ಉಂಟಾಗಿದ್ದ ಸಂಚಾರ ದಟ್ಟಣೆಯನ್ನು ಸರಿಪಡಿಸಲು ಕ್ರೇನ್ ನೆರವಿನಿಂದ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಬಸ್ಸನ್ನು ತೆರವುಗೊಳಿಸಲಾಯಿತು.

ಓದುಗರ ಅಭಿಪ್ರಾಯಗಳು

Leave a Reply

Your email address will not be published. Required fields are marked *