ಶಿವಮೊಗ್ಗ: ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಹಾಪ್ಕಾಮ್ಸ್ ಕಚೇರಿಯ ನೆಲಮಹಡಿಯಲ್ಲಿ ಹೊಸದಾಗಿ ಹಣ್ಣು ಹಾಗೂ ನೈಸರ್ಗಿಕ ಜ್ಯೂಸ್ ಮಾರಾಟ ಮಳಿಗೆಗೆ ಚಾಲನೆ ನೀಡಲಾಯಿತು. ಉದ್ಘಾಟನಾ ಸಮಾರಂಭದಲ್ಲಿ ಹಲವು ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಪ್ರಮುಖರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಶುಭಕೋರಿದರು.
ಕೃಷಿ ವಿವಿ ಹಣ್ಣುಗಳ ಮಾರಾಟಕ್ಕೆ ಯೋಜನೆ:
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ವಿ. ಧನಂಜಯ ಮಾತನಾಡಿ, “ಸ್ಥಳೀಯವಾಗಿ ಇಂತಹ ಮಳಿಗೆಗಳು ಆರಂಭವಾಗುತ್ತಿರುವುದು ಶ್ಲಾಘನೀಯ. ಇದರಿಂದ ಅನ್ನದಾತರಿಗೂ ಅನುಕೂಲ ದೊರೆಯಲಿದೆ. ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯದಲ್ಲಿ ಬೆಳೆಯುವ ವಿವಿಧ ಹಣ್ಣುಗಳನ್ನು ಸಹ ಹಾಪ್ಕಾಮ್ಸ್ ಸಹಯೋಗದೊಂದಿಗೆ ಸಾರ್ವಜನಿಕರಿಗೆ ಮಾರಾಟ ಮಾಡಲು ಚಿಂತನೆ ನಡೆಸಲಾಗಿದ್ದು, ಈ ಕುರಿತು ಶೀಘ್ರದಲ್ಲೇ ಮಾತುಕತೆ ನಡೆಸಲಾಗುವುದು” ಎಂದು ತಿಳಿಸಿದರು.

ರೈತರು ಮತ್ತು ಗ್ರಾಹಕರಿಗೆ ನೇರ ಲಾಭ:
ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, “ವಿವಿಧ ಋತುಗಳಲ್ಲಿ ದೊರೆಯುವ ಸ್ಥಳೀಯ ಮತ್ತು ವಿದೇಶಿ ತಳಿಯ ಹಣ್ಣುಗಳನ್ನು ಒಂದೇ ಸೂರಿನಡಿ ಜನರಿಗೆ ತಲುಪಿಸುವುದು ಇದರ ಪ್ರಮುಖ ಉದ್ದೇಶ. ರೈತರಿಂದ ನೇರವಾಗಿ ಉತ್ಪನ್ನಗಳನ್ನು ಖರೀದಿಸುವುದರಿಂದ ಬೆಳೆಗಾರರಿಗೆ ಸೂಕ್ತ ಬೆಲೆ ಸಿಗುವುದರ ಜೊತೆಗೆ, ಗ್ರಾಹಕರಿಗೂ ತಾಜಾ ಹಣ್ಣುಗಳು ಲಭ್ಯವಾಗಲಿವೆ” ಎಂದರು.
ಇದೇ ವೇಳೆ ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, “ಇದು ಜನಪರವಾದ ಉತ್ತಮ ಕಾರ್ಯ. ಗುಣಮಟ್ಟದ ಹಾಗೂ ನೈಸರ್ಗಿಕ ಹಣ್ಣುಗಳ ಸೇವನೆಯಿಂದ ಜನರ ಆರೋಗ್ಯ ಸುಧಾರಿಸುತ್ತದೆ. ಇಂತಹ ಉಪಕ್ರಮಗಳು ನಗರದಲ್ಲಿ ಮತ್ತಷ್ಟು ವಿಸ್ತರಣೆಯಾಗಬೇಕು” ಎಂದು ಹಾರೈಸಿದರು.
ವಿದೇಶಿ ಹಣ್ಣುಗಳು ಹಾಗೂ ನೈಸರ್ಗಿಕ ಜ್ಯೂಸ್ ಲಭ್ಯ:
ಹಾಪ್ಕಾಮ್ಸ್ ಅಧ್ಯಕ್ಷ ವಿಜಯ್ಕುಮಾರ್ (ದನಿ) ಮಾಹಿತಿ ನೀಡಿ, “ಗ್ರಾಹಕರಿಗೆ ಕಾಲಕ್ಕೆ ತಕ್ಕಂತೆ ಲಭ್ಯವಿರುವ ಎಲ್ಲ ಹಣ್ಣುಗಳನ್ನು ಒದಗಿಸಲು ವ್ಯವಸ್ಥೆ ಮಾಡಲಾಗಿದೆ. ಲಿಚ್ಚಿ, ರಾಂಬುಟಾನ್, ಲಾಂಗನ್, ಆಸ್ಟ್ರೇಲಿಯನ್ ದ್ರಾಕ್ಷಿ, ಸ್ಟಾರ್ ಫ್ರೂಟ್, ಡ್ರ್ಯಾಗನ್ ಫ್ರೂಟ್, ಚೆರ್ರಿ, ಕಿವಿ, ಬೀಜರಹಿತ ದ್ರಾಕ್ಷಿ, ನೇರಳೆ, ಬ್ಲೂಬೆರ್ರಿ, ಸ್ಟ್ರಾಬೆರಿ ಸೇರಿದಂತೆ ಹಲವು ಬಗೆಯ ದೇಶ-ವಿದೇಶಿ ಹಣ್ಣುಗಳು ಇಲ್ಲಿ ಸಿಗಲಿವೆ. ಇದರೊಂದಿಗೆ ಯಾವುದೇ ರಾಸಾಯನಿಕ ಬೆರೆಸದ ತಾಜಾ ಜ್ಯೂಸ್ ಸಹ ಗ್ರಾಹಕರಿಗೆ ದೊರೆಯಲಿದೆ” ಎಂದು ವಿವರಿಸಿದರು.

ಮಳಿಗೆಯ ನಿರ್ವಹಣೆ ವಹಿಸಿಕೊಂಡಿರುವ ಪ್ರಗತಿಪರ ಕೃಷಿಕ ಕೆ. ನಾಗರಾಜ್ ಮಾತನಾಡಿ, “ಸಾರ್ವಜನಿಕರು ಈ ಮಳಿಗೆಯ ಸದುಪಯೋಗ ಪಡೆದುಕೊಳ್ಳಬೇಕು. ಕೈಗೆಟುಕುವ ದರದಲ್ಲಿ ಗುಣಮಟ್ಟದ ಹಣ್ಣುಗಳನ್ನು ಒದಗಿಸಲಾಗುತ್ತಿದ್ದು, ರಾಸಾಯನಿಕ ಮುಕ್ತ ಸಾವಯವ ಗೊಬ್ಬರ ಬಳಸಿ ಬೆಳೆದ ಆರೋಗ್ಯಕರ ಹಣ್ಣುಗಳನ್ನು ಗ್ರಾಹಕರಿಗೆ ನೀಡುವುದು ನಮ್ಮ ಆದ್ಯತೆಯಾಗಿದೆ” ಎಂದರು.






ಓದುಗರ ಅಭಿಪ್ರಾಯಗಳು