ಶಿವಮೊಗ್ಗ: ಕನ್ನಡವು ಕೇವಲ ಮಾತುಕತೆಯ ಮಾಧ್ಯಮವಾಗಿರದೆ, ಅದು ನಮ್ಮ ಸಂಸ್ಕೃತಿ, ಬದುಕಿನ ವಿಧಾನ ಹಾಗೂ ಹೆಮ್ಮೆಯ ಸಂಕೇತವಾಗಿದೆ. ಇಂದಿನ ತಂತ್ರಜ್ಞಾನ ಹಾಗೂ ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಕನ್ನಡದ ಬಳಕೆ ಇನ್ನಷ್ಟು ವಿಸ್ತಾರಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಕರೆ ನೀಡಿದರು.

ನಗರದ ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ನವೆಂಬರ್ 1 ಕನ್ನಡಿಗರ ಒಗ್ಗಟ್ಟು, ದಶಕಗಳ ಹೋರಾಟ ಹಾಗೂ ತ್ಯಾಗದ ಸಂಕೇತ. 1956ರ ನವೆಂಬರ್ 1ರಂದು ಮೈಸೂರು ರಾಜ್ಯವಾಗಿ ಅಸ್ತಿತ್ವಕ್ಕೆ ಬಂದು, 1973ರಲ್ಲಿ ‘ಕರ್ನಾಟಕ’ ಎಂದು ಮರುನಾಮಕರಣಗೊಂಡ ಈ ದಿನವು ನಮ್ಮ ಸ್ವಾಭಿಮಾನದ ಪ್ರತೀಕವಾಗಿದೆ ಎಂದು ಸ್ಮರಿಸಿದರು.

ಜಿಲ್ಲೆಯ ಸಾಂಸ್ಕೃತಿಕ ಹಿರಿಮೆಯನ್ನು ಪ್ರಸ್ತಾಪಿಸಿದ ಅವರು, ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ಸಂದೇಶ ಇಡೀ ಜಗತ್ತಿಗೆ ಮಾರ್ಗದರ್ಶಿಯಾಗಿದೆ. ಕುವೆಂಪು, ಯು.ಆರ್. ಅನಂತಮೂರ್ತಿ ಅವರಂತಹ ಸಾಹಿತ್ಯ ದಿಗ್ಗಜರು, ಅಕ್ಕಮಹಾದೇವಿ, ಗೋಪಾಲಕೃಷ್ಣ ಅಡಿಗ, ಜಿ.ಎಸ್. ಶಿವರುದ್ರಪ್ಪ ಸೇರಿದಂತೆ ಹಲವು ಸಾಹಿತಿಗಳು ಕನ್ನಡದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಹೆಗ್ಗೋಡಿನ ನೀನಾಸಂ ಸಂಸ್ಥೆ, ಯಕ್ಷಗಾನ, ಡೊಳ್ಳುಕುಣಿತದಂತಹ ಕಲೆಗಳು ಹಾಗೂ ಜೋಗ, ಆಗುಂಬೆ, ಕೊಡಚಾದ್ರಿಯಂತಹ ನೈಸರ್ಗಿಕ ತಾಣಗಳು ಜಿಲ್ಲೆಗೆ ವಿಶಿಷ್ಟ ಮೆರುಗು ನೀಡಿವೆ ಎಂದರು. ಹಿರಿಯ ಮುತ್ಸದ್ದಿ ಕಾಗೋಡು ತಿಮ್ಮಪ್ಪ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಸಂದಿರುವುದು ಜಿಲ್ಲೆಗೆ ಸಂದ ಗೌರವ ಎಂದು ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳು:
ಕಳಸ ಹೊತ್ತ ವಿದ್ಯಾರ್ಥಿನಿಯರು:
ಕಸ್ತೂರಿ ಬಾ ಪ್ರೌಢಶಾಲೆಯ ನೂರಾರು ವಿದ್ಯಾರ್ಥಿನಿಯರು ಹಳದಿ, ಕೆಂಪು ಮತ್ತು ನೀಲಿ ಬಣ್ಣದ ಸೀರೆಗಳನ್ನುಟ್ಟು ಕನ್ನಡದ ಕಳಸ ಹೊತ್ತು ಸಾಗಿದ್ದು ಸಭಿಕರ ಗಮನ ಸೆಳೆಯಿತು.
ಭವ್ಯ ಮೆರವಣಿಗೆ:
ಸೈನ್ಸ್ ಮೈದಾನದಿಂದ ನೆಹರು ಕ್ರೀಡಾಂಗಣದವರೆಗೆ ನಡೆದ ಶ್ರೀ ಭುವನೇಶ್ವರಿ ದೇವಿ ಭಾವಚಿತ್ರ ಮೆರವಣಿಗೆಗೆ ಜಿಲ್ಲಾಧಿಕಾರಿಗಳು ಚಾಲನೆ ನೀಡಿದರು.

ಕನ್ನಡದಲ್ಲೇ ಕವಾಯತು:
ಆರ್.ಪಿ. ಸೋಮಶೇಖರಪ್ಪ ಅವರ ನೇತೃತ್ವದಲ್ಲಿ ಸಂಪೂರ್ಣ ಕನ್ನಡದ ಆಜ್ಞೆಗಳೊಂದಿಗೆ ಕೆಎಸ್ಆರ್ಪಿ, ಡಿಎಆರ್ ತುಕಡಿಗಳು ಮತ್ತು ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.
ಮನಸೆಳೆದ ನೃತ್ಯ:
‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಸೇರಿದಂತೆ ನಾಡು-ನುಡಿಯ ಹಾಡುಗಳಿಗೆ ಶಾಲಾ ಮಕ್ಕಳು ಆಕರ್ಷಕ ನೃತ್ಯ ಪ್ರದರ್ಶಿಸಿದರು.
ಪ್ರಶಸ್ತಿ ವಿಜೇತರು:
ಪಥಸಂಚಲನ: ಮಹಾವೀರ ವಿದ್ಯಾಸಂಸ್ಥೆ (ಪ್ರಥಮ), ಪೋದಾರ್ ಇಂಟರ್ ನ್ಯಾಷನಲ್ ಶಾಲೆ (ದ್ವಿತೀಯ), ಡಿವಿಎಸ್ ಪ್ರೌಢಶಾಲೆ (ತೃತೀಯ).
ಸ್ತಬ್ಧಚಿತ್ರ: ಕೆಎಸ್ಆರ್ಟಿಸಿ (ಪ್ರಥಮ), ಆರೋಗ್ಯ ಇಲಾಖೆ (ದ್ವಿತೀಯ), ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (ತೃತೀಯ).

ವೇದಿಕೆಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಜಿಲ್ಲಾ ಪಂಚಾಯತ್ ಸಿಇಒ ರಿಷಿ ಆನಂದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ಅಪರ ಜಿಲ್ಲಾಧಿಕಾರಿ ಅಭಿಷೇಕ್, ಉಪವಿಭಾಗಾಧಿಕಾರಿ ಡಾ. ಮೈತ್ರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.






ಓದುಗರ ಅಭಿಪ್ರಾಯಗಳು