ಅನ್ನದಾತರಿಗೆ ನ್ಯಾಯ ಸಿಗಬಾರದೇ? ಹಾಲಿನ ದರ ವಿವಾದಕ್ಕೆ ಶಿವಮೊಗ್ಗದಲ್ಲಿ ಸಿಕ್ತು ಖಡಕ್ ಉತ್ತರ

ಶಿವಮೊಗ್ಗ: ಹಾಲಿನ ಬೆಲೆ ಏರಿಕೆಯ ನೆಪದಲ್ಲಿ ವಿರೋಧ ಪಕ್ಷವಾದ ಬಿಜೆಪಿ ಸಾರ್ವಜನಿಕರನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಟೀಕಿಸಿದ್ದಾರೆ. ಪ್ರತಿ ಲೀಟರ್ ಹಾಲಿಗೆ ₹8 ಏರಿಕೆ ಮಾಡಿ, ಅದರಲ್ಲಿ ಸಿಂಹಪಾಲು ಅಂದರೆ ₹7 ನೇರವಾಗಿ ರೈತರ ಕೈಸೇರುವಂತೆ ಮಾಡಿರುವ ನಮ್ಮ ಸರ್ಕಾರದ ನಿಲುವು ಐತಿಹಾಸಿಕವಾದದ್ದು. ಕಷ್ಟದಲ್ಲಿರುವ ಅನ್ನದಾತರಿಗೆ ಬೆಂಬಲ ನೀಡುವುದು ಸರ್ಕಾರದ ಕರ್ತವ್ಯವಲ್ಲವೇ ಎಂದು ಅವರು ಪ್ರಶ್ನಿಸಿದರು.

ಶಿವಮೊಗ್ಗದ ನವುಲೆ ಕೃಷಿ ಕಾಲೇಜು ಆವರಣದಲ್ಲಿ, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಆಯೋಜಿಸಿದ್ದ ‘ಕೃಷಿ ಮತ್ತು ತೋಟಗಾರಿಕೆ ಮೇಳ-2026’ರಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಿರೋಧಕ್ಕಾಗಿ ವಿರೋಧ ಮಾಡುವುದೇ ಬಿಜೆಪಿಯ ಜಾಯಮಾನ. ಆದರೆ, ಬರಗಾಲದ ಹೊಡೆತಕ್ಕೆ ಸಿಲುಕಿರುವ ರೈತರ ಆರ್ಥಿಕ ಚೇತರಿಕೆಗೆ ನಮ್ಮ ಸರ್ಕಾರ ಗಟ್ಟಿಯಾದ ಹೆಜ್ಜೆ ಇಟ್ಟಿದೆ. ಹಿಂದೆಂದೂ ಇಂತಹ ನಿರ್ಧಾರಗಳು ಆಗಿರಲಿಲ್ಲ ಎಂದು ಸಮರ್ಥಿಸಿಕೊಂಡರು.

ಶಿವಮೊಗ್ಗ ಕೃಷಿ ವಿವಿಗೆ ಬಂಗಾರಪ್ಪವರೇ ಅಡಿಪಾಯ:

ಮಲೆನಾಡಿನ ರೈತರ ಮಕ್ಕಳಿಗೆ ವೈಜ್ಞಾನಿಕ ಕೃಷಿ ಶಿಕ್ಷಣ ಲಭ್ಯವಾಗಬೇಕು ಎಂಬ ಸಂಕಲ್ಪದಿಂದ 1990ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರು ಶಿವಮೊಗ್ಗದಲ್ಲಿ ಕೃಷಿ ವಿಶ್ವವಿದ್ಯಾಲಯಕ್ಕೆ ನಾಂದಿ ಹಾಡಿದರು. ಇದರೊಂದಿಗೆ ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪನವರು ಇರುವಕ್ಕಿ ಭಾಗದಲ್ಲಿ 787 ಎಕರೆ ಜಮೀನು ಒದಗಿಸಿ, ಮೊದಲ ಹಂತದಲ್ಲಿ ₹150 ಕೋಟಿ ಅನುದಾನ ತರುವ ಮೂಲಕ ವಿವಿ ಕೇಂದ್ರ ಕ್ಯಾಂಪಸ್ ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡಿದ್ದನ್ನು ಸಚಿವರು ಸ್ಮರಿಸಿದರು.

ಉಚಿತ ಪಂಪ್‌ಸೆಟ್‌ನಿಂದ ಅಡಿಕೆ ವಿಸ್ತರಣೆ:

ರಾಜ್ಯದ ಕೃಷಿ ಪ್ರಗತಿ ಕುರಿತು ಪ್ರಸ್ತಾಪಿಸಿದ ಅವರು, 1990ರ ಅವಧಿಯಲ್ಲಿ ಕೇವಲ 18 ಸಾವಿರ ಹೆಕ್ಟೇರ್‌ನಷ್ಟಿದ್ದ ಅಡಕೆ ಬೆಳೆ ಪ್ರದೇಶವು ಇಂದು ಸುಮಾರು 1.48 ಲಕ್ಷ ಹೆಕ್ಟೇರ್‌ಗೆ ತಲುಪಿದೆ. ಇದಕ್ಕೆ ಎಸ್. ಬಂಗಾರಪ್ಪ ಅವರ ಅವಧಿಯಲ್ಲಿ ಜಾರಿಗೆ ತಂದ ಉಚಿತ ಕೃಷಿ ಪಂಪ್‌ಸೆಟ್ ವಿದ್ಯುತ್ ಯೋಜನೆಯೇ ಪ್ರಮುಖ ಕಾರಣ ಎಂದು ವಿವರಿಸಿದರು.

ಸಮಾರಂಭದಲ್ಲಿ ಶಾಸಕ ಕೆ.ಎಸ್. ಬಸವಂತಪ್ಪ, ವಿವಿ ಕುಲಪತಿ ಡಾ. ಎಂ.ವಿ. ಧನಂಜಯ, ಕುಲಸಚಿವ ಡಾ. ಶಾಮರಾವ್ ಜಹಾಗೀರದಾರ್, ಸೂಡಾ ಅಧ್ಯಕ್ಷ ಸಿ.ಜೆ. ಮಧುಸೂದನ್ ಹಾಗೂ ವಿಶ್ವವಿದ್ಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.

ಓದುಗರ ಅಭಿಪ್ರಾಯಗಳು

Leave a Reply

Your email address will not be published. Required fields are marked *