ಶಿವಮೊಗ್ಗ: ಕಾಂಗ್ರೆಸ್ ಸರ್ಕಾರವು ಹಾಲಿನ ದರವನ್ನು ಪ್ರತಿ ಲೀಟರ್‌ಗೆ ₹8 ಹೆಚ್ಚಳ ಮಾಡಿ ಸಾರ್ವಜನಿಕರಿಗೆ ಹೊರೆ ನೀಡಿರುವುದನ್ನು ಖಂಡಿಸಿ, ನಗರ ಬಿಜೆಪಿ ವತಿಯಿಂದ ಇಲ್ಲಿನ ಶಿವಪ್ಪನಾಯಕ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ಎಸ್.ಎನ್. ಚನ್ನಬಸಪ್ಪ, ಸರ್ಕಾರದ ಜನವಿರೋಧಿ ನೀತಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
“ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೂರೂವರೆ ವರ್ಷಗಳಲ್ಲಿ ಹಾಲಿನ ದರವನ್ನು ನಾಲ್ಕು ಬಾರಿ ಪರಿಷ್ಕರಿಸಿ ಒಟ್ಟು ₹17 ಹೆಚ್ಚಿಸಿದೆ. ಕೇಂದ್ರದ ಬಿಜೆಪಿ ಸರ್ಕಾರ ಸರ್ಕಾರದ ಬೊಕ್ಕಸದಿಂದ ನೇರವಾಗಿ ರೈತರ ಖಾತೆಗೆ ಸಾವಿರಾರು ಕೋಟಿ ರೂಪಾಯಿ ಸಹಾಯಧನ ಜಮೆ ಮಾಡುತ್ತಿದೆ. ಆದರೆ, ರಾಜ್ಯದ ಭ್ರಷ್ಟ ಕಾಂಗ್ರೆಸ್ ಸರ್ಕಾರ ಬೊಕ್ಕಸವನ್ನು ಖಾಲಿ ಮಾಡಿ, ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿ ರೈತರಿಗೆ ನೀಡುವ ನಾಟಕವಾಡುತ್ತಿದೆ. ಇದು ಅಕ್ಷಮ್ಯ ಅಪರಾಧ,” ಎಂದು ಕಿಡಿಕಾರಿದರು.
ಮುಂದುವರಿದು ಮಾತನಾಡಿದ ಅವರು, “ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಜನಸಾಮಾನ್ಯರಿಗೆ ಹೊರೆಯಾಗದಂತೆ ಸರ್ಕಾರದ ಬೊಕ್ಕಸದಿಂದಲೇ ರೈತರಿಗೆ ಹಾಲಿನ ಪ್ರೋತ್ಸಾಹಧನ ನೀಡುವ ವ್ಯವಸ್ಥೆ ಮಾಡಿದ್ದರು. ಆದರೆ ಪ್ರಸ್ತುತ ಸರ್ಕಾರ ಕಳೆದ ಕೆಲ ತಿಂಗಳುಗಳಿಂದ ಆ ಪ್ರೋತ್ಸಾಹಧನವನ್ನೂ ಬಾಕಿ ಉಳಿಸಿಕೊಂಡಿದೆ. ಬರಗಾಲದಲ್ಲಿ ರೈತರ ನೆರವಿಗೆ ನಿಲ್ಲಬೇಕಾದ ಸರ್ಕಾರ, ಜನರ ಮೇಲೆ ತೆರಿಗೆ ಬರೆ ಎಳೆದು ರೈತರಿಗೆ ನೀಡಲು ಹೊರಟಿದೆ,” ಎಂದು ಆರೋಪಿಸಿದರು.

“ಕಿಸಾನ್ ಸಮ್ಮಾನ್ ಯೋಜನೆ, ಹಾಲಿಗೆ ಪ್ರೋತ್ಸಾಹಧನ ಹಾಗೂ ದೇಶದಲ್ಲೇ ಮೊದಲ ಬಾರಿಗೆ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಿದ್ದು ಬಿಜೆಪಿ ಸರ್ಕಾರ. ಆದರೆ ಇಂದು ನಮ್ಮನ್ನೇ ರೈತ ವಿರೋಧಿಗಳೆಂದು ಬಿಂಬಿಸಲಾಗುತ್ತಿದೆ. ಗ್ಯಾರಂಟಿಗಳ ಹೆಸರಿನಲ್ಲಿ ಬೊಕ್ಕಸ ಖಾಲಿ ಮಾಡಿಕೊಂಡ ಸರ್ಕಾರ, ಈಗ ಹಾಲು ಮತ್ತು ಬಸ್ ದರಗಳನ್ನು ಏರಿಸಿ ಜನಸಾಮಾನ್ಯರ ಜೀವನವನ್ನು ಮತ್ತಷ್ಟು ದುಸ್ತರಗೊಳಿಸುತ್ತಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ನಗರ ಬಿಜೆಪಿ ಅಧ್ಯಕ್ಷ ಮೋಹನ್ ರೆಡ್ಡಿ, ಪ್ರಮುಖ ಮುಖಂಡರಾದ ಕೆ.ಜಿ. ಕುಮಾರಸ್ವಾಮಿ, ಸುರೇಖಾ ಮುರಳೀಧರ್, ಶಾಂತಾ ಸುರೇಂದ್ರ, ರಶ್ಮಿ ಶ್ರೀನಿವಾಸ್, ಶಿವಾನಂದ್, ಸುರೇಖಾ ಪಾಲಾಕ್ಷಪ್ಪ, ಕುಮಾರ್, ವೀಣಾ ನಾಗರಾಜ್, ಯಶೋಧಾ ವೈಷ್ಣವ, ಅನ್ನಪೂರ್ಣ, ರೋಹಿಣಿ, ಶ್ರೀನಾಗ್, ಮಾಲತೇಶ್, ನವುಲೆ ಮಂಜುನಾಥ್, ಪ್ರಭು ಸೇರಿದಂತೆ ಶಕ್ತಿ ಕೇಂದ್ರದ ಪ್ರಮುಖರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.






ಓದುಗರ ಅಭಿಪ್ರಾಯಗಳು