ಶಿವಮೊಗ್ಗ : ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಶಿವಮೊಗ್ಗ ನಗರ ಮತ್ತು ಜಿಲ್ಲೆಯಾದ್ಯಂತ ಕಳೆಗಟ್ಟಿದ್ದು, ಸಿದ್ಧತೆಗಳು ಬಿರುಸಿನಿಂದ ಸಾಗಿವೆ. ನವೆಂಬರ್ 8 ರಿಂದ 10 ರವರೆಗೆ ಮೂರು ದಿನಗಳ ಕಾಲ ಜರುಗಲಿರುವ ಹಬ್ಬದ ಆಚರಣೆಗಾಗಿ ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿಯಲ್ಲಿ ಮುಳುಗಿದ್ದು, ನಗರದ ಮಾರುಕಟ್ಟೆಗಳು ಜನಸಂದಣಿಯಿಂದ ತುಂಬಿಹೋಗಿವೆ.
ಹೂವು, ಹಣ್ಣು, ಬಗೆಬಗೆಯ ಹಣತೆ, ಆಕಾಶಬುಟ್ಟಿ, ಪೂಜಾ ಸಾಮಗ್ರಿಗಳು, ನೂತನ ವಸ್ತ್ರಗಳು ಹಾಗೂ ಪಟಾಕಿಗಳ ಖರೀದಿ ಭರಾಟೆ ಜೋರಾಗಿದೆ. ನಗರದ ಪ್ರಮುಖ ವಾಣಿಜ್ಯ ಪ್ರದೇಶಗಳಾದ ಗಾಂಧಿ ಬಜಾರ್, ದುರ್ಗಿಗುಡಿ, ಬಿ.ಎಚ್. ರಸ್ತೆ, ಲಕ್ಷ್ಮಿ ಚಿತ್ರಮಂದಿರ ವೃತ್ತ, ಗೋಪಿ ವೃತ್ತ, ಗೋಪಾಳ, ಪೊಲೀಸ್ ಚೌಕಿ, ವಿದ್ಯಾನಗರ ಮತ್ತು ಸವಳಂಗ ರಸ್ತೆಗಳಲ್ಲಿ ಮುಂಜಾನೆಯಿಂದಲೇ ಗ್ರಾಹಕರ ದಂಡು ಕಂಡುಬಂತು. ಕುಟುಂಬ ಸಮೇತರಾಗಿ ಆಗಮಿಸಿದ ಜನರಿಂದಾಗಿ ಜನದಟ್ಟಣೆ ಉಂಟಾಗಿದ್ದು, ವಾಹನ ಸಂಚಾರವನ್ನು ನಿಯಂತ್ರಿಸಲು ಸಂಚಾರ ಪೊಲೀಸರು ಸತತ ಪ್ರಯತ್ನ ನಡೆಸಿದರು.
ಹಣತೆ ಮತ್ತು ಆಕಾಶಬುಟ್ಟಿಗಳ ಆಕರ್ಷಣೆ:
ಹಬ್ಬದ ಪ್ರಮುಖ ಸಂಕೇತವಾದ ಹಣತೆಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗಿದೆ. ಸಾಂಪ್ರದಾಯಿಕ ಮಣ್ಣಿನ ದೀಪಗಳ ಜೊತೆಗೆ ನವನವೀನ ವಿನ್ಯಾಸದ, ಬಣ್ಣಬಣ್ಣದ ಅಲಂಕಾರಿಕ ಹಣತೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಇವುಗಳ ದರ ಕನಿಷ್ಠ 5 ರೂಪಾಯಿಯಿಂದ 300 ರೂಪಾಯಿವರೆಗೂ ಇದೆ. ಇನ್ನು ಮನೆ ಮತ್ತು ಅಂಗಡಿಗಳ ಮುಂದೆ ತೂಗುಬಿಡುವ ನಕ್ಷತ್ರ, ಚಂದ್ರನ ಮಾದರಿಯ ಆಕರ್ಷಕ ಆಕಾಶಬುಟ್ಟಿಗಳು ಗಮನ ಸೆಳೆಯುತ್ತಿವೆ. ಮಹಾರಾಷ್ಟ್ರ, ದೆಹಲಿ ಹಾಗೂ ರಾಜಸ್ಥಾನಗಳಿಂದ ತರಿಸಲಾದ ಈ ಬುಟ್ಟಿಗಳು ಗಾತ್ರ ಮತ್ತು ವಿನ್ಯಾಸಕ್ಕೆ ತಕ್ಕಂತೆ ಮಾರಾಟವಾಗುತ್ತಿವೆ.
ಹೂವು-ಹಣ್ಣುಗಳ ದರ ವಿವರ:
ಪೂಜಾ ಕೈಂಕರ್ಯಗಳಿಗೆ ಬಳಕೆಯಾಗುವ ಚೆಂಡು ಹೂವು, ಸೇವಂತಿಗೆ, ಮಲ್ಲಿಗೆ, ಗುಲಾಬಿ, ಕನಕಾಂಬರ ಮತ್ತು ಸುಗಂಧರಾಜ ಹೂವುಗಳ ಮಾರಾಟ ಚುರುಕಾಗಿದೆ. ಮಾರುಕಟ್ಟೆಗೆ ಹೂವಿನ ಆವಕ ಸಮರ್ಪಕವಾಗಿದ್ದು, ಮಳೆಯ ವಾತಾವರಣವೂ ಇರುವುದರಿಂದ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿಲ್ಲ. ವರಮಹಾಲಕ್ಷ್ಮಿ ಹಾಗೂ ದಸರಾ ಹಬ್ಬಗಳಿಗೆ ಹೋಲಿಸಿದರೆ ವ್ಯಾಪಾರ ಸಾಧಾರಣವಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಹೂವು: ಚೆಂಡು ಹೂವು ಕೆಜಿಗೆ ₹100-₹150, ಸೇವಂತಿಗೆ ಕೆಜಿಗೆ ₹150-₹200, ಮಲ್ಲಿಗೆ ಕೆಜಿಗೆ ₹100 ಹಾಗೂ ಹೂವಿನ ಹಾರಗಳು ₹150 ರಿಂದ ₹400 ರವರೆಗೆ ಮಾರಾಟವಾಗುತ್ತಿವೆ.
ಹಣ್ಣು: ಸೇಬು ಕೆಜಿಗೆ ₹150-₹200, ದಾಳಿಂಬೆ ₹250, ಮೋಸಂಬಿ ಮತ್ತು ಸೀತಾಫಲ ₹200, ಕಿತ್ತಳೆ ₹100 ಹಾಗೂ ಬಾಳೆಹಣ್ಣು ₹40-₹70 ರವರೆಗೆ ಇದೆ.
ಪೂಜಾ ದ್ರವ್ಯಗಳು: ಜೋಡಿ ಬಾಳೆಕಂದು ₹40-₹50 ಹಾಗೂ ಜೋಡಿ ಕಬ್ಬು ₹20-₹40 ಕ್ಕೆ ಮಾರಾಟವಾಗುತ್ತಿವೆ.
ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುವ ಪಟಾಕಿಗಳ ಖರೀದಿಗೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ನಗರದ ಅಲ್ಲಮಪ್ರಭು ಮೈದಾನದಲ್ಲಿ ವ್ಯವಸ್ಥಿತವಾಗಿ 98ಕ್ಕೂ ಹೆಚ್ಚು ಪಟಾಕಿ ಮಳಿಗೆಗಳನ್ನು ತೆರೆಯಲಾಗಿದ್ದು, ವಿವಿಧ ನಮೂನೆಯ ಪಟಾಕಿಗಳನ್ನು ಕೊಳ್ಳಲು ಜನರು ಮುಗಿಬಿದ್ದಿದ್ದಾರೆ.






ಓದುಗರ ಅಭಿಪ್ರಾಯಗಳು