ಶಿವಮೊಗ್ಗ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ನಡೆಸಿದ ಪ್ರತಿಷ್ಠಿತ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್ಡಿಎ) ಪ್ರವೇಶ ಪರೀಕ್ಷೆಯ ಮಹಿಳಾ ವಿಭಾಗದಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ತಿಮ್ಮಾಪುರ ಗ್ರಾಮದ ಶ್ರೇಯಾ ಎನ್. ಗೌಡ ದೇಶದಲ್ಲೇ ಮೊದಲ ಸ್ಥಾನ ಗಳಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಶಿಕ್ಷಣದ ಹಿನ್ನೆಲೆ:
ಶ್ರೇಯಾ ಅವರು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು (1ರಿಂದ 10ನೇ ತರಗತಿ) ಭದ್ರಾವತಿಯ ಕಾರೇಹಳ್ಳಿಯ ಬಿಜಿಎಸ್ ಶಾಲೆಯಲ್ಲಿ ಪೂರ್ಣಗೊಳಿಸಿದ್ದರು. ಬಳಿಕ ಬೆಂಗಳೂರಿನ ರಾಜಾಜಿನಗರದಲ್ಲಿರುವ ಬೇಸ್ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದು, ಸದ್ಯ ಮಂಗಳೂರಿನ ಸುರತ್ಕಲ್ನ ಎನ್ಐಟಿಕೆ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾರೆ.
ಬಾಲ್ಯದ ಕನಸಿಗೆ ಮೊದಲ ಯತ್ನದಲ್ಲೇ ಜಯ:
ಚಿಕ್ಕಂದಿನಿಂದಲೇ ರಕ್ಷಣಾ ಪಡೆ ಸೇರಬೇಕೆಂಬ ಮಹದಾಸೆ ಹೊಂದಿದ್ದ ಶ್ರೇಯಾಗೆ, ಅವರು 8ನೇ ತರಗತಿಯಲ್ಲಿದ್ದಾಗ ಎನ್ಡಿಎಗೆ ಮಹಿಳೆಯರಿಗೂ ಪ್ರವೇಶಾವಕಾಶ ಕಲ್ಪಿಸಿದ ತೀರ್ಮಾನ ಹೊಸ ಹುರುಪು ನೀಡಿತ್ತು. ಅಂದಿನಿಂದಲೇ ಸತತ ಸಿದ್ಧತೆ ನಡೆಸಿದ್ದ ಅವರು, ಮೊದಲ ಪ್ರಯತ್ನದಲ್ಲೇ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ್ಯಾಂಕ್ ಗಿಟ್ಟಿಸಿಕೊಳ್ಳುವ ಮೂಲಕ ತಮ್ಮ ಗುರಿಯನ್ನು ಮುಟ್ಟಿದ್ದಾರೆ.
“ಶ್ರೇಯಾ ಅವರಿಗೆ ಭಾರತೀಯ ಸಶಸ್ತ್ರ ಪಡೆಗಳಲ್ಲಿ ಅತ್ಯುತ್ತಮ ಭವಿಷ್ಯ ಸಿಗಲಿ, ದೇಶಸೇವೆಯ ಅವರ ಕನಸು ಸಾಕಾರಗೊಳ್ಳಲಿ ಎಂದು ಹೃದಯಪೂರ್ವಕವಾಗಿ ಹಾರೈಸುತ್ತೇನೆ.”
– ಬಿ.ವೈ. ರಾಘವೇಂದ್ರ, ಶಿವಮೊಗ್ಗ ಸಂಸದ
ಕುಟುಂಬದ ಪ್ರೋತ್ಸಾಹ:
ಶ್ರೇಯಾ ಅವರ ತಂದೆ ಜೆ. ನಾಗೇಂದ್ರ ಅವರು ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಯ ಉದ್ಯೋಗಿಯಾಗಿದ್ದು, ತಾಯಿ ಡಾ. ಬಿ.ಎಂ. ಆಶಾ ಅವರು ಅತಿಥಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಗಳ ರಕ್ಷಣಾ ಪಡೆಯ ಸೇರ್ಪಡೆಯ ಆಸಕ್ತಿಗೆ ಪೋಷಕರು ಸಂಪೂರ್ಣ ಬೆಂಬಲ ಮತ್ತು ಪ್ರೋತ್ಸಾಹ ನೀಡಿದ್ದು ಈ ಮಹತ್ತರ ಸಾಧನೆಗೆ ಪ್ರೇರಣೆಯಾಗಿದೆ.






ಓದುಗರ ಅಭಿಪ್ರಾಯಗಳು