ಕಾಂಗ್ರೆಸ್‌ನ ಆ ಒಂದು ನಡೆಗೆ ಬಿಜೆಪಿ ಕೆಂಡಾಮಂಡಲ; ನ. 5ಕ್ಕೆ ಶಿವಮೊಗ್ಗದಲ್ಲಿ ನಡೆಯಲಿದೆಯಾ ಮಹಾ ಕದನ?

ಶಿವಮೊಗ್ಗ: ಎಸ್‌ಐಆರ್ (SIR) ಈ ದೇಶದ ಹೆಮ್ಮೆ ಹಾಗೂ ಅಸ್ಮಿತೆಯಾಗಿದ್ದು, ಇದನ್ನು ವಿರೋಧಿಸುವವರು ದೇಶದ್ರೋಹಿಗಳಾಗಿದ್ದಾರೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಕಟುವಾಗಿ ಟೀಕಿಸಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. “ಕಾಂಗ್ರೆಸ್‌ಗೆ ದೇಶದ ಏಕತೆ ಎಂದಿಗೂ ಇಷ್ಟವಿಲ್ಲ. ಮೊದಲಿನಿಂದಲೂ ಸಮಾಜವನ್ನು ವಿಭಜಿಸುವ ತಂತ್ರವನ್ನೇ ಅನುಸರಿಸಿಕೊಂಡು ಬಂದಿರುವ ಆ ಪಕ್ಷ, ಇದೀಗ ಎಸ್‌ಐಆರ್ ವಿಚಾರವಾಗಿ ಜನಸಾಮಾನ್ಯರ ದಾರಿತಪ್ಪಿಸುತ್ತಿದೆ. ದೇಶಾದ್ಯಂತ ಸರಣಿ ಸೋಲುಗಳನ್ನು ಕಂಡಿರುವ ಕಾಂಗ್ರೆಸ್, ಪ್ರಜಾಪ್ರಭುತ್ವದ ಆಧಾರಸ್ತಂಭವಾದ ಸಂವಿಧಾನ ಹಾಗೂ ಚುನಾವಣಾ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಯತ್ನಿಸುತ್ತಿದೆ. ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗಕ್ಕೆ ಗೌರವ ಕೊಡುವ ಬದಲು ಅವಮಾನಿಸುತ್ತಿರುವುದು ಜನತೆಗೆ ಬಗೆಯುತ್ತಿರುವ ನಂಬಿಕೆದ್ರೋಹ” ಎಂದು ಕಿಡಿಕಾರಿದರು.

ನವೆಂಬರ್ 5ರಂದು ಬೃಹತ್ ಪ್ರತಿಭಟನೆ:

ಕಾಂಗ್ರೆಸ್‌ನ ಈ ಧೋರಣೆಯನ್ನು ಖಂಡಿಸಿ ಬಿಜೆಪಿ ವತಿಯಿಂದ ‘ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ’ ಎಂಬ ಘೋಷಣೆಯೊಂದಿಗೆ ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ 10 ಪ್ರಮುಖ ಸ್ಥಳಗಳಲ್ಲಿ ಜಾಗೃತಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ ಶಿವಮೊಗ್ಗದಲ್ಲಿ ನವೆಂಬರ್ 5ರಂದು ಬೆಳಗ್ಗೆ 10 ಗಂಟೆಗೆ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಅಲ್ಲಮ ಪ್ರಭು ಮೈದಾನದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಇದರ ನೇತೃತ್ವ ವಹಿಸಲಿದ್ದು, ಪಕ್ಷದ ಜನಪ್ರತಿನಿಧಿಗಳು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಮನೆ ಮನೆ ಪ್ರಚಾರ ಕಾರ್ಯವೂ ಚಾಲನೆಯಲ್ಲಿದೆ ಎಂದರು.

ಎಸ್‌ಐಆರ್ ಪ್ರಕ್ರಿಯೆಗೆ ಸಮರ್ಥನೆ:

“ಮೃತಪಟ್ಟವರನ್ನು, ಊರು ತೊರೆದವರನ್ನು ಹಾಗೂ ಎರಡು ಕಡೆ ಮತದಾರರ ಪಟ್ಟಿಯಲ್ಲಿದ್ದವರ ಹೆಸರುಗಳನ್ನು ಕೈಬಿಡುವುದು ತಪ್ಪು ಹೇಗಾಗುತ್ತದೆ? ಎಸ್‌ಐಆರ್ ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿದೆ. ತನ್ನ ರಾಜಕೀಯ ವೈಫಲ್ಯವನ್ನು ಮುಚ್ಚಿಡಲು ಕಾಂಗ್ರೆಸ್ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದೆ. ಇಂತಹ ದುರುದ್ದೇಶಪೂರಿತ ನಡವಳಿಕೆಯನ್ನು ಬಿಜೆಪಿ ಬಲವಾಗಿ ಹಿಮ್ಮೆಟ್ಟಿಸಲಿದ್ದು, ಜನರಿಗೆ ವಾಸ್ತವಾಂಶವನ್ನು ತಲುಪಿಸಲಿದೆ” ಎಂದು ಚನ್ನಬಸಪ್ಪ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖ ಮುಖಂಡರಾದ ಮೋಹನ್ ರೆಡ್ಡಿ, ದೀನ್‌ದಯಾಳ್, ನವುಲೆ ಮಂಜುನಾಥ್, ಶ್ರೀನಾಗ್, ಸೋಮೇಶ್ ಪಿ. ಶೇಟ್, ಪ್ರಭಾಕರ್, ಮಹಾಲಕ್ಷ್ಮಿ, ಲತಾ, ಯಶೋಧ, ಸುಧಾಮಣಿ, ಪ್ರಕಾಶ್, ಪರಮೇಶ್ ನಾಯ್ಕ್, ಲತಾ ಶ್ರೀನಿವಾಸ್, ಸೆಲ್ವಂ, ರಂಗೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಓದುಗರ ಅಭಿಪ್ರಾಯಗಳು

Leave a Reply

Your email address will not be published. Required fields are marked *