ಇನ್ಮುಂದೆ ಶಿವಮೊಗ್ಗದಲ್ಲೇ ಸವಿಯಿರಿ ತಾಜಾ ಜ್ಯೂಸ್, ಅಪರೂಪದ ಹಣ್ಣು: ಎಲ್ಲಿ ಗೊತ್ತಾ ?

ಶಿವಮೊಗ್ಗ: ಋತುಮಾನಕ್ಕೆ ತಕ್ಕಂತೆ ಲಭ್ಯವಾಗುವ ವಿವಿಧ ಬಗೆಯ ದೇಶಿ ಹಾಗೂ ವಿದೇಶಿ ಹಣ್ಣುಗಳನ್ನು ಗ್ರಾಹಕರಿಗೆ ಒಂದೇ ಸೂರಿನಡಿ ಒದಗಿಸಲು ಶಿವಮೊಗ್ಗ ಜಿಲ್ಲಾ ಹಾಪ್‌ಕಾಮ್ಸ್ ಮುಂದಾಗಿದೆ. ಸಂಸ್ಥೆಯ ವತಿಯಿಂದ ಗಾಂಧಿ ಪಾರ್ಕ್ ಸಮೀಪದ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಪ್ರಧಾನ ಕಚೇರಿಯ ಕೆಳಭಾಗದಲ್ಲಿ ನೂತನ ಹಣ್ಣು ಮತ್ತು ತಾಜಾ ಜ್ಯೂಸ್ ಮಾರಾಟ ಮಳಿಗೆಯನ್ನು ನವೆಂಬರ್ 6ರಂದು ಬೆಳಿಗ್ಗೆ 11 ಗಂಟೆಗೆ ಉದ್ಘಾಟಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಆರ್. ವಿಜಯಕುಮಾರ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಹಕರಿಗೆ ಗುಣಮಟ್ಟದ ಹಣ್ಣುಗಳನ್ನು ಒದಗಿಸುವುದೇ ಈ ಮಳಿಗೆಯ ಮುಖ್ಯ ಉದ್ದೇಶ ಎಂದರು.

ವೈವಿಧ್ಯಮಯ ಹಣ್ಣುಗಳು:

ಲಿಚ್ಚಿ, ರಾಂಬುಟಾನ್, ಲಾಂಗನ್, ಆಸ್ಟ್ರೇಲಿಯನ್ ದ್ರಾಕ್ಷಿ, ಸ್ಟಾರ್ ಫ್ರೂಟ್, ಡ್ರ್ಯಾಗನ್ ಫ್ರೂಟ್, ಚೆರ್ರಿ, ಮ್ಯಾಂಡರಿನ್, ಕಿವಿ, ಬೀಜರಹಿತ ದ್ರಾಕ್ಷಿ, ನೇರಳೆ, ಬ್ಲೂಬೆರ್ರಿ ಹಾಗೂ ಸ್ಟ್ರಾಬೆರಿ ಸೇರಿದಂತೆ ಹಲವು ಬಗೆಯ ಹಣ್ಣುಗಳು ಲಭ್ಯವಿರಲಿವೆ.

ತಾಜಾ ಜ್ಯೂಸ್:

ಗ್ರಾಹಕರಿಗೆ ಸ್ಥಳದಲ್ಲೇ ತಾಜಾ ಹಣ್ಣಿನ ಜ್ಯೂಸ್ ಸಿದ್ಧಪಡಿಸಿ ಮಾರಾಟ ಮಾಡಲಾಗುತ್ತದೆ.

ಸಾವಯವ ಸೀಬೆಹಣ್ಣು:

ಕೃಷಿ ಮೇಳದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿದ್ದ ಪ್ರಗತಿಪರ ಕೃಷಿಕ ಕೆ. ನಾಗರಾಜ್ ಅವರ ತೋಟದಲ್ಲಿ ಹಾಪ್‌ಕಾಮ್ಸ್‌ನ ಸಾವಯವ ಗೊಬ್ಬರ ಬಳಸಿ ಬೆಳೆದ ಸೀಬೆಹಣ್ಣು ಕೂಡ ಇಲ್ಲಿ ದೊರೆಯಲಿದೆ (ಕೃಷಿ ಮೇಳದಲ್ಲಿ ಸುಮಾರು 10 ಕ್ವಿಂಟಲ್ ಮಾರಾಟವಾಗಿತ್ತು).

ಹಾಪ್‌ಕಾಮ್ಸ್ ಸಾವಯವ ಗೊಬ್ಬರಕ್ಕೆ ಹೆಚ್ಚಿದ ಬೇಡಿಕೆ:

ಹಾಪ್‌ಕಾಮ್ಸ್ ವತಿಯಿಂದ ತಯಾರಾಗುತ್ತಿರುವ ‘ರೈತ ಮಿತ್ರ’ ಹಾಗೂ ‘ರೈತ ಸ್ನೇಹಿ’ ಸಾವಯವ ಗೊಬ್ಬರಕ್ಕೆ ರೈತರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ. ಹೊಳಲ್ಕೆರೆ ಸಮೀಪದ ಘಟಕದಲ್ಲಿ ತಯಾರಾಗುವ ಈ ಗೊಬ್ಬರವು 40 ಕೆ.ಜಿ. ಚೀಲಕ್ಕೆ ₹370 ದರ ಹೊಂದಿದ್ದು, ಶಿವಮೊಗ್ಗ ಮತ್ತು ಭದ್ರಾವತಿ ಭಾಗದ ರೈತರಿಗೆ ಉಚಿತ ಸಾಗಣೆ ವೆಚ್ಚದಲ್ಲಿ ಪೂರೈಸಲಾಗುತ್ತಿದೆ. ಕಳೆದ 6–7 ತಿಂಗಳಲ್ಲಿ 50ರಿಂದ 60 ಸಾವಿರ ಚೀಲಗಳು ಮಾರಾಟವಾಗಿದ್ದು, ಚಿಕ್ಕಮಗಳೂರು, ಕೊಪ್ಪ ಸೇರಿದಂತೆ ಹೊರ ಜಿಲ್ಲೆಗಳಿಂದಲೂ ಬೇಡಿಕೆ ಬರುತ್ತಿದೆ ಎಂದು ವಿಜಯಕುಮಾರ್ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ವ್ಯವಸ್ಥಾಪಕ ನಿರ್ದೇಶಕ ಕೆ.ಆರ್. ಅಕ್ಷಯ್, ನಿರ್ದೇಶಕರಾದ ಶರತ್ ಮರಿಯಪ್ಪ, ನಾಗೇಶ್ ನಾಯ್ಕ್, ನಾಗರಾಜ್ ಗೌಡ್ರು, ಕಾಂತರಾಜ್, ಮೋಹನ್ ಗೌಡ ಹಾಗೂ ಮಳಿಗೆ ನಿರ್ವಹಣೆಯ ಹೊಣೆ ಹೊತ್ತಿರುವ ಪ್ರಗತಿಪರ ಕೃಷಿಕ ಕೆ. ನಾಗರಾಜ್ ಉಪಸ್ಥಿತರಿದ್ದರು.

ಓದುಗರ ಅಭಿಪ್ರಾಯಗಳು

Leave a Reply

Your email address will not be published. Required fields are marked *