ತೀರ್ಥಹಳ್ಳಿ: ತಾಲೂಕಿನ ದಬ್ಬಣಗದ್ದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾತ್ರಿವೇಳೆ ಅಪರಿಚಿತ ವ್ಯಕ್ತಿಗಳು ಬೀಗ ಮುರಿದು ಒಳನುಗ್ಗಿ ಕಳವಿಗೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.
ಏಕೋಪಾಧ್ಯಾಯ ವ್ಯವಸ್ಥೆಯಿರುವ ಈ ಶಾಲೆಯ ಶಿಕ್ಷಕರು ತೀವ್ರ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದು, ತಾತ್ಕಾಲಿಕವಾಗಿ ವಿದ್ಯಾರ್ಥಿಗಳನ್ನು ಪಕ್ಕದ ಶಾಲೆಗೆ ಸ್ಥಳಾಂತರಿಸಿ ತರಗತಿಗಳನ್ನು ನಡೆಸಲಾಗುತ್ತಿದೆ. ಶಾಲೆ ಖಾಲಿ ಇರುವುದನ್ನೇ ಹೊಂಚು ಹಾಕಿದ ದುಷ್ಕರ್ಮಿಗಳು, ಕೊಠಡಿಯ ಬೀಗ ಮುರಿದು ಕಂಪ್ಯೂಟರ್ ಸೇರಿದಂತೆ ಇನ್ನಿತರ ಡಿಜಿಟಲ್ ಸಾಮಗ್ರಿಗಳನ್ನು ಕದಿಯಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೆ, ಶಾಲೆಯ ಕಡತಗಳು ಹಾಗೂ ಪ್ರಮುಖ ದಾಖಲೆಗಳನ್ನು ಜಾಲಾಡಿರುವ ಶಂಕೆ ವ್ಯಕ್ತವಾಗಿದೆ.
ಈ ಕುರಿತು ಮಾಹಿತಿ ಪಡೆದಿರುವ ಮಾಳೂರು ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿಸಿದ್ದಾರೆ.



ಓದುಗರ ಅಭಿಪ್ರಾಯಗಳು