ರಿಪ್ಪನ್ಪೇಟೆ: ಅರಣ್ಯದಿಂದ ಕಾನೂನುಬಾಹಿರವಾಗಿ ಕಡಿದು ಸಾಗಿಸಲು ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ರೂಪಾಯಿ ಬೆಲೆಬಾಳುವ ತೇಗದ (ಸಾಗುವಾನಿ) ಮರಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ.
ಹೊಸನಗರ ತಾಲೂಕಿನ ಬಾಳೂರು ಪಂಚಾಯಿತಿಗೆ ಸೇರಿದ ಬೆಳಂದೂರು ಗ್ರಾಮದ ಸರ್ವೇ ನಂ. 51ರ ಅರಣ್ಯ ಪ್ರದೇಶದಲ್ಲಿ ತೇಗದ ಮರಗಳ ಮಾರಣಹೋಮ ನಡೆಸಿ, ದಿಮ್ಮಿಗಳನ್ನಾಗಿ ಶೇಖರಿಸಲಾಗಿದೆ ಎಂಬ ಖಚಿತ ಸುಳಿವು ಇಲಾಖೆಗೆ ಸಿಕ್ಕಿತ್ತು.
ಮಾಹಿತಿ ಮೇರೆಗೆ ಅರಸಾಳು ವಲಯ ಅರಣ್ಯಾಧಿಕಾರಿ ಶರಣಪ್ಪ ಅವರ ಮಾರ್ಗದರ್ಶನದಲ್ಲಿ ಅಧಿಕಾರಿಗಳ ತಂಡ ತಕ್ಷಣವೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿತು. ಈ ವೇಳೆ ಅಕ್ರಮವಾಗಿ ಕಡಿದು ಬಚ್ಚಿಟ್ಟಿದ್ದ ಸುಮಾರು ₹4 ಲಕ್ಷ ಮೌಲ್ಯದ ತೇಗದ ದಿಮ್ಮಿಗಳು ಕಂಡುಬಂದಿದ್ದು, ಅವುಗಳನ್ನು ಸ್ಥಳದಲ್ಲೇ ಮುಟ್ಟುಗೋಲು ಹಾಕಿಕೊಳ್ಳಲಾಯಿತು.

ಈ ದಾಳಿಯಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಸುನಿಲ್, ಕುಮಾರ್ ಮಾಂಗ್ ಹಾಗೂ ಇಲಾಖೆಯ ಸಿಬ್ಬಂದಿ ಪಾಲ್ಗೊಂಡಿದ್ದರು.
ಘಟನೆ ಸಂಬಂಧ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ದೂರು ದಾಖಲಾಗಿದ್ದು, ಮರ ಕಡಿದು ಅಕ್ರಮ ಸಾಗಣೆಗೆ ಯತ್ನಿಸಿದವರ ಪತ್ತೆಗಾಗಿ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ.




ಓದುಗರ ಅಭಿಪ್ರಾಯಗಳು