ಶಿವಮೊಗ್ಗದ ಇಎಸ್‌ಐ ಕಾರ್ಮಿಕರ ಪರ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಭಯ

ಶಿವಮೊಗ್ಗ: ಜಿಲ್ಲೆಯ ಇಎಸ್‌ಐ ಕಾರ್ಮಿಕರು ಎದುರಿಸುತ್ತಿರುವ ವೈದ್ಯಕೀಯ ಚಿಕಿತ್ಸಾ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸುವುದಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭರವಸೆ ನೀಡಿದ್ದಾರೆ.

ನಗರದ ರಾಯಲ್ ಆರ್ಕಿಡ್‌ನಲ್ಲಿ ಶಿವಮೊಗ್ಗ–ಭದ್ರಾವತಿ ಕೈಗಾರಿಕಾ ಸಂಘ, ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಾಗೂ ಕಾರ್ಮಿಕ ಸಂಘಟನೆಗಳ ನಿಯೋಗವು ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ರಾಜ್ಯ ಸರ್ಕಾರದ ಇತ್ತೀಚಿನ ಸುತ್ತೋಲೆಯಿಂದಾಗಿ, ಇಎಸ್‌ಐ ಕಾರ್ಡ್ ಹೊಂದಿರುವ ನೌಕರರಿಗೆ ಖಾಸಗಿ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಒಪಿಡಿ (ಹೊರರೋಗಿ) ಚಿಕಿತ್ಸೆಗೆ ನೀಡಲಾಗುತ್ತಿದ್ದ ರೆಫರಲ್ ಸೇವೆಯನ್ನು ನಿಲ್ಲಿಸಲಾಗಿದೆ. ಇದರಿಂದಾಗಿ ತುರ್ತು ಚಿಕಿತ್ಸೆ ಸಿಗದೆ ನೂರಾರು ಕಾರ್ಮಿಕರು ಹಾಗೂ ಅವರ ಕುಟುಂಬಸ್ಥರು ಪರದಾಡುವಂತಾಗಿದೆ ಎಂದು ನಿಯೋಗವು ಸಚಿವರ ಗಮನಕ್ಕೆ ತಂದಿತು.

ಸಮಸ್ಯೆಯ ತೀವ್ರತೆಯನ್ನು ಅರಿತ ಸಚಿವರು, ಸ್ಥಳದಲ್ಲೇ ಕೇಂದ್ರ ಸರ್ಕಾರದ ಸಂಬಂಧಪಟ್ಟ ಹಿರಿಯ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದರು. ರಾಜ್ಯ ಸರ್ಕಾರದ ಆದೇಶದ ವಸ್ತುಸ್ಥಿತಿಯನ್ನು ಪರಿಶೀಲಿಸಿ, ನೌಕರರಿಗೆ ತೊಂದರೆಯಾಗದಂತೆ ತುರ್ತು ಕ್ರಮ ಕೈಗೊಳ್ಳಲು ಸೂಚಿಸಿದರು.

ಈ ನಿಯೋಗದಲ್ಲಿ ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ, ವಾಣಿಜ್ಯ ಮಂಡಳಿಯ ಮುಖಂಡರಾದ ಜಿ. ವಿಜಯ್ ಕುಮಾರ್, ಎ.ಎಂ. ಸುರೇಶ್, ಆರ್. ಮನೋಹರ್, ಕೈಗಾರಿಕಾ ಸಂಘದ ಅಧ್ಯಕ್ಷ ಎಲ್. ಚಂದ್ರಶೇಖರ್, ಕಾರ್ಯದರ್ಶಿ ಎಸ್.ಎಸ್. ರಾಜೇಶ್, ದಿನೇಶ್, ಕಾರ್ಮಿಕ ಸಂಘಟನೆಯ ರಾಜಾಸಾಬ್ ಹಾಗೂ ಕಲ್ಲೂರು ಮಂಡಳಿ ಅಸೋಸಿಯೇಷನ್‌ನ ರವಿ ಜನ್ಯ ಸೇರಿದಂತೆ ಹಲವು ಪ್ರಮುಖರು ಪಾಲ್ಗೊಂಡಿದ್ದರು.

ಓದುಗರ ಅಭಿಪ್ರಾಯಗಳು

Leave a Reply

Your email address will not be published. Required fields are marked *