ಶಿವಮೊಗ್ಗ: ನಗರದ ಜಯನಗರದ 2ನೇ ಕ್ರಾಸ್ನಲ್ಲಿರುವ ಖಾಸಗಿ ಕಿಡ್ಸ್ ಶಾಲೆಯ ಕಟ್ಟಡದ ಮೇಲ್ಭಾಗದಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಭಾರೀ ಪ್ರಮಾಣದ ಪಟಾಕಿಗಳನ್ನು ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
ಅಮರ್ ಎಂಬುವವರು ಶಾಲಾ ಕಟ್ಟಡದ ಮೇಲ್ಭಾಗದಲ್ಲಿ ಪಟಾಕಿಗಳನ್ನು ಸಂಗ್ರಹಿಸಿಟ್ಟಿರುವ ಬಗ್ಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ, ಎಸಿ ಮೈತ್ರಿ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿತು. ಈ ವೇಳೆ ಅಪಾರ ಪ್ರಮಾಣದ ಪಟಾಕಿಗಳು ಪತ್ತೆಯಾಗಿದ್ದು, ಅವುಗಳನ್ನು ಜಪ್ತಿ ಮಾಡಲಾಗಿದೆ.
ಪಟಾಕಿಗಳ ಸಂಗ್ರಹಣೆ ಮತ್ತು ದಾಸ್ತಾನಿಗೆ ಸಂಬಂಧಿಸಿದಂತೆ ನಿಗದಿತ ಸುರಕ್ಷತಾ ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ. ಅದರಲ್ಲೂ ಮಕ್ಕಳು ವಿದ್ಯಾಭ್ಯಾಸ ಮಾಡುವ ಶಾಲೆಯ ಕಟ್ಟಡದಲ್ಲೇ ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ಪಟಾಕಿಗಳನ್ನು ಇರಿಸಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಒಂದು ವೇಳೆ ಬೆಂಕಿ ಅವಘಡ ಸಂಭವಿಸಿದ್ದರೆ ಭಾರೀ ಅನಾಹುತ ಉಂಟಾಗುವ ಸಾಧ್ಯತೆಯಿತ್ತು. ಸಕಾಲದಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಪಟಾಕಿಗಳನ್ನು ವಶಪಡಿಸಿಕೊಂಡಿರುವುದರಿಂದ ಸಂಭವನೀಯ ಅಪಾಯ ತಪ್ಪಿದಂತಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಪಟಾಕಿ ಸಂಗ್ರಹಿಸಿದ್ದ ವ್ಯಕ್ತಿ, ತಮ್ಮ ಗೋದಾಮಿನಲ್ಲಿ ಸ್ಥಳಾವಕಾಶವಿಲ್ಲದ ಕಾರಣ ಅನಿವಾರ್ಯವಾಗಿ ತಾತ್ಕಾಲಿಕವಾಗಿ ಶಾಲಾ ಕಟ್ಟಡದ ಮೇಲ್ಭಾಗದಲ್ಲಿ ಪಟಾಕಿಗಳನ್ನು ಇರಿಸಿದ್ದಾಗಿ ತಿಳಿಸಿದ್ದಾರೆ.
ಬೆಳಿಗ್ಗೆ ಪಟಾಕಿಗಳನ್ನು ತಂದು ಸಂಜೆಯೊಳಗೆ ಬೇರೆ ಸ್ಥಳಕ್ಕೆ ಸ್ಥಳಾಂತರಿಸುವ ಉದ್ದೇಶ ಹೊಂದಿದ್ದೆ. ಆದರೆ ಅಷ್ಟರಲ್ಲೇ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ರೀತಿ ಸಂಗ್ರಹಿಸಿರುವುದು ತಪ್ಪು ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಕಾನೂನಿನ ಪ್ರಕಾರ ಅಧಿಕಾರಿಗಳು ಕೈಗೊಳ್ಳುವ ಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಹೇಳಿದ್ದಾರೆ.
ಶಾಲಾ ಕಟ್ಟಡದಲ್ಲಿ ಪಟಾಕಿಗಳ ಅಕ್ರಮ ದಾಸ್ತಾನು ಪ್ರಕರಣ ಸ್ಥಳೀಯರಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಇಂತಹ ಅಪಾಯಕಾರಿ ಕೃತ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.






ಓದುಗರ ಅಭಿಪ್ರಾಯಗಳು