ಶಿಕಾರಿಪುರ ಜಿ.ಪಂ. ಅಖಾಡದಲ್ಲಿ ಮೀಸಲಾತಿ ಬಿರುಗಾಳಿ: ಕೋರ್ಟ್ ಮೆಟ್ಟಿಲೇರಿದ ವಿವಾದ

ಶಿಕಾರಿಪುರ: ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಾಗಿ ರಾಜ್ಯ ಸರ್ಕಾರ ಪ್ರಕಟಿಸಿರುವ ತಾತ್ಕಾಲಿಕ ಮೀಸಲಾತಿ ಪಟ್ಟಿಯು ಶಿಕಾರಿಪುರ ತಾಲೂಕಿನಲ್ಲಿ ತೀವ್ರ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ಸರ್ಕಾರದ ಮೀಸಲಾತಿ ಹಂಚಿಕೆಯಲ್ಲಿ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿ ಹಲವರು ಆಕ್ಷೇಪಣೆ ಸಲ್ಲಿಸಿರುವುದರ ಜೊತೆಗೆ, ಇದೀಗ ಕಾನೂನು ಹೋರಾಟಕ್ಕೂ ಅಣಿಯಾಗಿದ್ದಾರೆ.

ತಾಲೂಕಿನ ಒಟ್ಟು ಐದು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೆ ನಿಗದಿಪಡಿಸಲಾಗಿರುವ ಪ್ರಸ್ತುತ ಮೀಸಲಾತಿ ವಿವರ ಹೀಗಿದೆ.

  • ಹೊಸೂರು: ಪರಿಶಿಷ್ಟ ಪಂಗಡ (ST)
  • ಈಸೂರು: ಸಾಮಾನ್ಯ ಮಹಿಳೆ
  • ಸುಣ್ಣದಕೊಪ್ಪ: ಸಾಮಾನ್ಯ
  • ಕಪ್ಪನಹಳ್ಳಿ: ಪರಿಶಿಷ್ಟ ಜಾತಿ (SC)
  • ತೊಗರ್ಸಿ: ಪರಿಶಿಷ್ಟ ಜಾತಿ ಮಹಿಳೆ (SC ಮಹಿಳೆ)

ಈಸೂರು ಕ್ಷೇತ್ರ ಮೀಸಲಾತಿಗೆ ಭಾರಿ ವಿರೋಧ:

ಘೋಷಿತ ಕ್ಷೇತ್ರಗಳ ಪೈಕಿ ಈಸೂರು ಕ್ಷೇತ್ರದ ಮೀಸಲಾತಿ ಬಗ್ಗೆ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ. ಇಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಪರಿಶಿಷ್ಟ ಜಾತಿಯ ಮತದಾರರಿದ್ದರೂ, ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಂದಾಗಿನಿಂದ ಇಂದಿನವರೆಗೂ ಈ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಿಲ್ಲ ಎಂಬುದು ಸ್ಥಳೀಯರ ಮುಖ್ಯ ಆಕ್ರೋಶ.

ಈ ಹಿಂದೆ 1995, 2005 ಹಾಗೂ 2015ರಲ್ಲೂ ಈಸೂರು ಕ್ಷೇತ್ರ ‘ಸಾಮಾನ್ಯ ಮಹಿಳೆ’ಗೆ ಮೀಸಲಾಗಿತ್ತು. ಇದೀಗ 2026ರ ಚುನಾವಣೆಯಲ್ಲೂ ಅದೇ ಮೀಸಲಾತಿಯನ್ನು ಪುನರಾವರ್ತಿಸಿರುವುದು ಪ್ರಭಾವಿ ರಾಜಕೀಯ ಮುಖಂಡರ ಹಿತಾಸಕ್ತಿ ಕಾಪಾಡುವ ತಂತ್ರ ಎಂದು ದಲಿತ ಸಮುದಾಯದ ಮುಖಂಡರು ಆರೋಪಿಸಿದ್ದಾರೆ. ಸಮುದಾಯವನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ಎದ್ದಿದೆ.

ಹಿಂದಿನ ಮೀಸಲಾತಿಗಳ ಹಿನ್ನೋಟ:

ಹೊಸೂರು: 1995ರಲ್ಲಿ SC, 2000ದಲ್ಲಿ ಸಾಮಾನ್ಯ ಮಹಿಳೆ, 2005ರಲ್ಲಿ SC, 2010ರಲ್ಲಿ ಸಾಮಾನ್ಯ ಮಹಿಳೆ ಹಾಗೂ 2015ರಲ್ಲಿ ST ಮಹಿಳೆಗೆ ಹಂಚಿಕೆಯಾಗಿತ್ತು.

ಸುಣ್ಣದಕೊಪ್ಪ: 2005ರಲ್ಲಿ ಅಸ್ತಿತ್ವಕ್ಕೆ ಬಂದಾಗ ST ಮಹಿಳೆ, 2010ರಲ್ಲಿ ಸಾಮಾನ್ಯ ಹಾಗೂ 2015ರಲ್ಲಿ BCM-A ಮಹಿಳೆಗೆ ಮೀಸಲಾಗಿತ್ತು. ಪ್ರಸ್ತುತ ಸಾಮಾನ್ಯ ಕ್ಷೇತ್ರವಾಗಿದೆ.

ಕಪ್ಪನಹಳ್ಳಿ: 2010ರಂತೆ ಈ ಬಾರಿಯೂ ಪರಿಶಿಷ್ಟ ಜಾತಿಗೆ ಮೀಸಲಾಗಿದೆ.

ತೊಗರ್ಸಿ: 2000ದಲ್ಲಿ SC, 2015ರಲ್ಲಿ SC ಮಹಿಳೆ ಮೀಸಲಾಗಿದ್ದು, ಈ ಬಾರಿಯೂ SC ಮಹಿಳೆಗೆ ನಿಗದಿಯಾಗಿದೆ.

ಈಸೂರು: 1995, 2005, 2015 ಹಾಗೂ ಪ್ರಸ್ತುತ ಬಾರಿಯೂ ಸಾಮಾನ್ಯ ಮಹಿಳೆಗೆ ಮೀಸಲಾದರೆ; 2000 ಮತ್ತು 2010ರಲ್ಲಿ BCM-A ವರ್ಗಕ್ಕೆ ನಿಗದಿಯಾಗಿತ್ತು. ಇಲ್ಲಿ ಒಮ್ಮೆಯೂ SC/ST ಸಮುದಾಯಕ್ಕೆ ಅವಕಾಶ ಸಿಕ್ಕಿಲ್ಲ.

ಇದಲ್ಲದೆ, ತಾಲೂಕಿನ ಪ್ರಮುಖ ಜನಸಂಖ್ಯೆಯನ್ನು ಹೊಂದಿರುವ ಹಿಂದುಳಿದ ವರ್ಗಗಳಾದ ವೀರಶೈವ, ಕುರುಬ, ಮರಾಠ ಮತ್ತು ಮುಸ್ಲಿಂ ಸಮುದಾಯಗಳಿಗೂ ಸಮರ್ಪಕ ಪ್ರಾತಿನಿಧ್ಯ ದೊರೆತಿಲ್ಲ ಎಂಬ ಅಸಮಾಧಾನ ವಿವಿಧ ಪಕ್ಷಗಳ ಕಾರ್ಯಕರ್ತರಲ್ಲಿ ವ್ಯಕ್ತವಾಗುತ್ತಿದೆ.

“ತಾಲ್ಲೂಕಿನ ಐದೂ ಕ್ಷೇತ್ರಗಳ ಮೀಸಲಾತಿ ಹಂಚಿಕೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಈ ಸಂಬಂಧ ಜಿಲ್ಲಾಡಳಿತ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಲಿಖಿತ ದೂರು ಸಲ್ಲಿಸಲಾಗಿದೆ. ಅನ್ಯಾಯವನ್ನು ಪ್ರಶ್ನಿಸಿ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದ್ದು, ನ್ಯಾಯಾಲಯವು ಅರ್ಜಿಯನ್ನು ಪುರಸ್ಕರಿಸಿ ನವೆಂಬರ್ 30ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಿದೆ.”
– ಕೋಟೇಶ್ವರ, ಸಾಮಾಜಿಕ ಹೋರಾಟಗಾರ

ಓದುಗರ ಅಭಿಪ್ರಾಯಗಳು

Leave a Reply

Your email address will not be published. Required fields are marked *